ಕರ್ನಾಟಕದ ಭಕ್ತಿ ಪರಂಪರೆಯಲ್ಲಿ ಹರಿದಾಸರ ಸ್ಥಾನ ವಿಶಿಷ್ಠವಾದುದು. ಕನ್ನಡ ಸಾಹಿತ್ಯ ಭಂಡಾರಕ್ಕೆ ಅವರು ಕೊಟ್ಟ ಕೊಡುಗೆ ಅಮೂಲ್ಯವಾದುದು. ಸಂಸಾರದಲ್ಲಿದ್ದರೂ, ಸಂಸಾರಪಾಶಕ್ಕೆ ಸಿಲುಕದೆ, ಕಮಲದೆಲೆಯೆ ನೀರಿನಂತೆ ಸಂಸಾರದಲ್ಲಿರಬೇಕು, ಇಲ್ಲದಿರಬೇಕು (ನೀರಿಗೆ ಸೋಕದ ತಾವರೆ) ಎಂಬಂತೆ ಸ್ವಾರ್ಥಕ್ಕೆ ವಿಮುಖರಾಗಿ ಸದ್ಗುಣ ಸಂಪನ್ನರಾಗಿ ತಮ್ಮ ಬದುಕು ಬೋಧನೆಯಿಂದ ಜನಜೀವನವನ್ನು ಹಸನಗೊಳಿಸಿದ ಹೃದಯ ಶ್ರೀಮಂತರು ಹರಿದಾಸರು.
ಭೂಮಂಡಲಕ್ಕೆ ಹಿಂಡು ದೈವರ ಗಂಡ ಪಾಂಡುರಂಗನೇ ಪರದೈವವೆಂದೂ, ಶ್ರೀಹರಿಯೇ ಸರ್ವೋತ್ತಮನೆಂದು ಸದೃಢವಾಗಿ ನಂಬಿ, ಅದರಂತೆ ಶ್ರೀಹರಿಯ ಪ್ರೇಮವನ್ನು ಸದಾಕಾಲ ಚಿಂತಿಸುವ ಅಂತರ್ದೀಕ್ಷೆಯನ್ನು ಬಿಂಬಿಸುವ ವೈಷ್ಣವ ಚಿಹ್ನೆಗಳಿಂದ ಭೂಷಿತರಾಗಿ, ತಾಳ-ತಂಬೂರಿಗಳನ್ನು ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಲ್ಲಿ ತುಳಸೀ ಮಾಲೆ ಧರಿಸಿ, ತಲೆಗೆ ವೈರಾಗ್ಯ ಸೂಚಕವಾದ ಪವಿತ್ರ ಶೇಷವಸ್ತ್ರವನ್ನು ಸುತ್ತಿ, “ಕಲಿಯುಗದಲಿ ಹರಿ ನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವು” ಎಂದು ಸಾರಿದವರು ಹರಿದಾಸರು.
ಮಧ್ವ ಮತದ ಸಿದ್ಧಾಂತದ ಪದ್ಧತಿಯನ್ನು ಬದ್ಧ ಕಂಕಣರಾಗಿ ಪರಿಪಾಲಿಸಿ, ಪದುಮನಾಭನ ದಾಸರ ಜೊತೆಗೂಡಿ ಭಗವದ್ಭಜನೆ ಮಾಡುತ್ತಾ “ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ” ಎಂದು ಮೈ ಮರೆತು ನರ್ತಿಸಿದವರು ಹರಿದಾಸರು. ಜಗತ್ತಿನಲ್ಲಿ ನಡೆಯುವ ಸರ್ವ ವ್ಯಾಪಾರಗಳೂ ಶ್ರೀಹರಿಯ ಸಂಕಲ್ಪವೆಂದೂ, “ತೇನ ವಿನಾ ತೃಣ ಮಪಿ ನ ಚಲತಿ” ಎಂಬಂತೆ ಅವನ ಪ್ರೇರಣೆಯಿಲ್ಲದೆ ಹುಲ್ಲುಕಡ್ಡಿಯೂ ಸಹ ಅಲುಗಾಡುವುದಿಲ್ಲವೆಂದು ನಿಶ್ಚಿತವಾಗಿ ತಿಳಿದವರು ಹರಿದಾಸರು. “ಈಸ ಬೇಕು ಇದ್ದು ಜಯಿಸಬೇಕು” ಎಂಬ ದಿವ್ಯ ಸಂದೇಶದೊಂದಿಗೆ “ಮಾನವ ಜನ್ಮ ದೊಡ್ಡದು ಇದ ಹಾಳು ಮಾಡಲು ಬೇಡಿ” ಎಂಬ ಕಿವಿ ಮಾತನ್ನು ಹೇಳಿ ಎಚ್ಚರಿಸಿದವರು ಹರಿದಾಸರು. ನಿರಾಶೆ ತುಂಬಿದವರ ಬದುಕಿನಲ್ಲಿ ಚೈತನ್ಯದ ಚಿಲುಮೆಯನ್ನು ಚಿಮ್ಮಿಸಿ “ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ” ಎಂಬ ಭರವಸೆಯನ್ನು ನೀಡಿ ಜೀವಕ್ಕೆ ಅಪೂರ್ವ ಭದ್ರತೆಯನ್ನು ಒದಗಿಸಿದವರು ಹರಿದಾಸರು. “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ…..” ಎಂಬ ಕ್ರಾಂತಿಕಾರಕ ನುಡಿಗಳನ್ನಾಡಿ ಅಂತಹ ಸಂಪ್ರದಾಯಗಳಿಂದ ಬದ್ಧರಾದವರನ್ನು ತಿದ್ದಿ ತಿಳಿ ಹೇಳಿದವರು ಹರಿದಾಸರು. ನುಡಿದಂತೆ ನಡೆಯುವ ತಮ್ಮ ಜೀವಿತಾದರ್ಶನದ ಪ್ರಭಾವದಿಂದ ಜನರ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾಜದ ಓರೆಕೋರೆಗಳನ್ನು ನೇರಗೊಳಿಸಿ ಸಾಮರಸ್ಯದ ವಿಶಾಲ ದೃಷ್ಟಿಯನ್ನು ನೀಡಿದ ನವಸಮಾಜದ ನಿರ್ಮಾಣದ ಹರಿಕಾರರು ಹರಿದಾಸರು.
ಹರಿಸರ್ವೋತ್ತಮ, ವಾಯುಜೀವೋತ್ತಮ, ಹರ ವೈಷ್ಣವೋತ್ತಮ ಇಂದ್ರಾದಿ ಸುರರೆಲ್ಲ ಶ್ರೀಹರಿಯ ಕಿಂಕರರು, ಜಗತ್ತು ಸತ್ಯವಾದುದು, ತಾರತಮ್ಯ ಸತ್ಯವಾದುದು, ಪಂಚಭೇದ ಸತ್ಯವಾದುದು, ಜೀವ ಅಸ್ವತಂತ್ರ, ಶ್ರೀಹರಿಯೇ ಸರ್ವತಂತ್ರ ಸ್ವತಂತ್ರ, ಶ್ರೀಹರಿಯ ಮಹಾತ್ಮೆಯ ಜ್ಞಾನಪೂರ್ವಕವಾಗಿ ಮಾಡುವ ಸದೃಢ ನಿರ್ಮಲ ಭಕ್ತಿಯೇ ಮುಕ್ತಿಗೆ ಸಾಧನ, “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬಂತೆ ಗುರುವಿನ ಅನುಗ್ರಹದ ಮೂಲಕವೇ ವೇದವೇದ್ಯನಾದ ಗೋವಿಂದನ ದರ್ಶನ. ಇವು ಹರಿದಾಸರ ತತ್ವಗಳಲ್ಲಿನ ತಿರುಳು. ಎಲ್ಲಾ ರೀತಿಯಲ್ಲಿ, ಎಲ್ಲಾ ವಸ್ತುವಿನಲ್ಲಿ, ಎಲ್ಲಾ ಪ್ರಾಣಿಗಳಲ್ಲಿ, ಎಲ್ಲಾ ಸ್ಥಳಗಳಲ್ಲಿ ಶ್ರೀಹರಿಯನ್ನು ಕಾಣುತ್ತಾ ” ಎಲ್ಲಿ ನೋಡಲು ನೀನು ಇಲ್ಲದ ಸ್ಥಳವಿಲ್ಲ ಎಲ್ಲರಂತರ್ಯಾಮಿಯಾಗಿ ಎಲ್ಲೆಲ್ಲಿಯೂ ನೀನೇ “ ಎಂದು ಹಾಡುತ್ತಾ ಅಂತಹ ನಿನ್ನ ” ದಾಸೋಹಂ ತವ ದಾಸೋಹಂ “ ಎಂದು ಹರಿಯ ದಾಸರಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ಬಿಂಬಮೂರ್ತಿಯ ಸೇವೆಗೆ ಮೀಸಲಿಟ್ಟು ಸರ್ವ ಸಮರ್ಪಣ ಮಾಡಿಕೊಳ್ಳುವುದು ಹರಿದಾಸರ ಪ್ರಮುಖ ಲಕ್ಷಣ.
ಕನ್ನಡ ಭಾಷೆಯಲ್ಲಿ ರಚಿತವಾದ ಹರಿದಾಸವಾಣಿಯು ಬಹು ಆಕರ್ಷಣೀಯವಾಗಿದ್ದು, ಸುಜೀವಿಯಲ್ಲಿ ದಿವ್ಯಜ್ಞಾನವನ್ನು ಬೆಳೆಸಿ, ಭಕ್ತಿಯ ಪ್ರವಾಹವನ್ನು ಹರಿಸುವುದು. ಸಂಸ್ಕೃತ ಜ್ಞಾನವಿಲ್ಲದ ವ್ಯಕ್ತಿಗೆ ಹರಿದಾಸಸಾಹಿತ್ಯದ ಅಧ್ಯಯನ-ಮನನಾದಿ ಜ್ಞಾನ- ವೈರಾಗ್ಯ- ಭಕ್ತಿಗಳನ್ನು ಯಥಾಯೋಗ್ಯವಾಗಿ ತಂದುಕೊಡಲು ಸಮರ್ಥವಾಗಿದೆ. ಹರಿದಾಸರ ಪ್ರತಿಕೃತಿಗಳಲ್ಲಿಯೂ ಶ್ರೀಮದಾಚಾರ್ಯರ ಸತ್ಸಿಂಧಾಂತವು ವಿರಾಟ್ ರೂಪವನ್ನು ತಾಳಿನಿಂತಿದೆ. ಈಗಿನ ಪರಿಸರ ವಾತಾವರಣದಲ್ಲಿ ಜೀವನವನ್ನು ಧನ್ಯಮಾಡಿಕೊಳ್ಳಲು ಸಂಸ್ಕೃತ ಭಾಷೆಯಿಂದ ದೂರಾದ ಪ್ರತಿ ಸಾಧಕನಿಗೆ ” ಹರಿದಾಸರೇ ಗತಿಯು ನಮಗೆ “ ಎಂಬಂತೆ ಹರಿದಾಸ ಸಾಹಿತ್ಯವು ದಾರಿ ದೀಪವಾಗಿದೆ.
ಇಂತಹ ಹರಿದಾಸಸಹಿತ್ಯದಲ್ಲಿ ಅನೇಕ ಯತಿಗಳು, ದಾಸರುಗಳು ಬಂದಿದ್ದಾರೆ, ಬರುತ್ತಿದ್ದಾರೆ. ಈ ಹರಿದಾಸಸಾಹಿತ್ಯದಲ್ಲಿ ಶ್ರೀಮಧ್ವಾಚಾರ್ಯರು, ನರಹರಿತೀರ್ಥರು, ಶ್ರೀಪಾದರಾಜರು, ವ್ಯಾಸರಾಜರು, ವಿಜಯೀಂದ್ರತೀರ್ಥರು, ವಾದಿರಾಜರು ಹಾಗೂ ಶ್ರೀರಾಘವೇಂದ್ರಗುರುಸಾರ್ವಭೌಮರು ಹೀಗೆ ಹಲವು ಯತಿಗಳು ಯತಿಕಕ್ಷೆಯನ್ನಲಂಕರಿಸಿದರೆ…, ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಹೀಗೆ ಹಲವು ದಾಸರುಗಳು ದಾಸಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ.