ಚನ್ನಪಟ್ಟಣ ತಾಲೂಕಿನ ಹತ್ತಿರ ಅಬ್ಬೂರು ಗ್ರಾಮದಲ್ಲಿ ಮನೆ ಮಾಡಿಕೊಂಡಿದ್ದ ಶ್ರೀಶೇಷಗಿರಿ ಆಚಾರ್ಯರು ಮತ್ತು ಗಿರಿಯಮ್ಮನವರಲ್ಲಿ ಶ್ರೀಲಕ್ಷ್ಮೀನಾರಾಯಣನ ಅವತಾರವಾಯಿತು. ಇದೆ ಬಾಲಕನೇ ಮುಂದೆ ಶ್ರೀ ಶ್ರೀಪಾದರಾಜ ಎಂಬ ಹೆಸರಿನಿಂದ ವಿಶ್ವ ವಿಖ್ಯಾತರಾದರು.
ಆ ಬಾಲಕ ಚಿಕ್ಕವನಿದ್ದಾಗಲೇ ಕಲ್ಲು, ಮಣ್ಣುಗಳಿಂದ ದೇವರ ಮೂರ್ತಿಗಳನ್ನು ಮಾಡಿ ಗೆಳೆಯರ ಜತೆಗೂಡಿ ಪೂಜಿಸಿ ಹಾಡು ಹಾಡಿ ಧ್ಯಾನ ಮಾಡಿ ಗಾನದಲ್ಲಿ ಮೈಮರೆತ್ತಿದ್ದರಂತೆ!!
ಮುಂದೆ ಶ್ರೀ ಶ್ರೀಪಾದರಾಜರು ದಾಸಕೂಟದ ಕುಲದೇವತೆಯಾದ ಶ್ರೀವಿಠ್ಠಲನ ದರ್ಶನಕ್ಕೆಂದು ಪಂಢರಪುರಕ್ಕೆ ದಿಗ್ವಿಜಯ ಮಾಡಿದರು. ಅಲ್ಲಿ ವಿಠ್ಠಲನ ದರ್ಶನ ತೆಗೆದುಕೊಂಡು ತಮ್ಮ ವಾಸಸ್ಥಾನಕ್ಕೆ ಬಂದು ಮಲಗಿದಾಗ ಒಂದು ಕನಸು ಬಿದ್ದಿತು.
ಬೆಳಿಗ್ಗೆ ಎದ್ದ ಕೂಡಲೇ ಅವರು ನೇರವಾಗಿ ಶಿಷ್ಯರೊಂದಿಗೆ ಚಂದ್ರಭಾಗಾ ನದಿಗೆ ಹೋಗಿ ಅಲ್ಲಿ ಒಂದು ಸ್ಥಳದಲ್ಲಿ ಮರಳ ರಾಶಿಯನ್ನು ಅಗಿಯಲಿಕ್ಕೆ ಶಿಷ್ಯರಿಗೆ ಆಜ್ಞೆ ಮಾಡಿದರು. ಅಲ್ಲಿ ಉಸುಕಿನ ಆಳದಲ್ಲಿ ಒಂದು ಬಂಗಾರದ ಪೆಟ್ಟಿಗೆಯು ದೊರೆಯಿತು. ಕೂಡಲೇ ಶ್ರೀ ಶ್ರೀಪಾದರಾಜರು ಭೀಮರಥಿಯಲ್ಲಿ ಮಿಂದು ಬಂದು ಆ ಸುವರ್ಣ ಮಂಟಪದ ಮೇಲು ಮುಚ್ಚಳವನ್ನು ತೆರೆದರು. ಒಳಗೆ ಶ್ರೀರಂಗ ವಿಠ್ಠಲನ ಸುಂದರ ಪ್ರತಿಮೆಯು ಕಂಗೊಳಿಸುತ್ತಿತ್ತು. ಶ್ರೀ ಶ್ರೀಪಾದರಾಜರಿಗೆ ದೊಡ್ಡದಾದ ಒಂದು ನಿಧಿಯೇ ದೊರೆತಂತೆ ಸಂತೋಷವಾಗಿ ಮೈಯೆಲ್ಲಾ ರೋಮಾಂಚಿತವಾಗಿ ಆನಂದ ಭಾಷ್ಪ ಉದುರಿದವು !
ಶ್ರೀಮದಾನಂದತೀರ್ಥರು ಉಡುಪಿಯ ಶ್ರೀ ಕೃಷ್ಣ ಪರಮಾತ್ಮನನ್ನು ತಲೆಯ ಮೇಲೆ ಹೊತ್ತುಕೊಂಡು ಬಂದಂತೆ ಶ್ರೀ ಶ್ರೀಪಾದರಾಜರೂ ಶ್ರೀರಂಗ ವಿಠ್ಠಲನನ್ನು ತಮ್ಮ ಮಸ್ತಕದ ಮೇಲಿಟ್ಟುಕೊಂಡರು! ಅಂದು ಸ್ವಾಮಿಗಳ ಸ್ವಪ್ನ ಸೂಚಿತನಾದ ಶ್ರೀರಂಗವಿಠ್ಠಲನಿಗೂ ಕೂಡಿಯೇ ಏಕಾಸನದ ಪೀಠದಲ್ಲಿಯೇ ಶ್ರೀ ಶ್ರೀಪಾದರಾಜರಿಂದ ಮಾನಸೋಪಚಾರಗಳು ನಡೆದವು.
ಅಂದಿನಿಂದಲೇ ಶ್ರೀ ಶ್ರೀಪಾದರಾಜರು “ರಂಗವಿಠ್ಠಲ” ಮುದ್ರಿಕೆಯಿಂದ ಕನ್ನಡ ಪದ – ಪದ್ಯ – ಉಗಾಭೋಗಳನ್ನು ಕಟ್ಟಿ ಹಾಡಲು ಪ್ರಾರಂಭ ಮಾಡಿದರು. ತಮ್ಮಿಂದ ಪ್ರಾರಂಭವಾದ ದಾಸ ಸಾಹಿತ್ಯಕ್ಕೆ “ವಿಠ್ಠಲ” ನನ್ನೇ ಕುಲ ದೇವತೆಯನ್ನಾಗಿ ಮಾಡಿಟ್ಟರು. ಅವರ ಸೂಚನೆಯನ್ನೇ ಅನುಸರಿಸಿ ಬಂದ ಪಂಢರಪುರದ ವಿಠ್ಠಲನನ್ನು ತಮ್ಮ ಪದ ಪದ್ಯಗಳ ಅಂಕಿತವನ್ನಾಗಿ ಮಾಡಿಕೊಂಡು ಶ್ರೀಪುರಂದರದಾಸರು, ಶ್ರೀವಿಜಯದಾಸರು – ಶ್ರೀಗೋಪಾಲದಾಸರು – ಶ್ರೀ ಜಗನ್ನಾಥದಾಸರೇ ಮೊದಲಾದ ಅನೇಕ ದಾಸ ಶ್ರೇಷ್ಠರು ಪದ – ಪದ್ಯ – ಸುಳಾದಿ – ಉಗಾಭೋಗಗಳನ್ನೂ ರಚಿಸಿದ್ದಾರೆ.
ಶ್ರೀ ಶ್ರೀಪಾದರಾಜರು ಮಾಧ್ವ ಸಮಾಜಕ್ಕಿತ್ತ ಅಮೂಲ್ಯ ಇನ್ನೊಂದು ಕಾಣಿಕೆಯೆಂದರೆ ಶ್ರೀವ್ಯಾಸರಾಜರು. ಶ್ರೀಬ್ರಹ್ಮಣ್ಯತೀರ್ಥರ ಶಿಷ್ಯರಾದ ಶ್ರೀವ್ಯಾಸರಾಜರು ನ್ಯಾಯ – ವೇದಾಂತ – ವ್ಯಾಕರಣ – ಸಾಹಿತ್ಯ – ಮೀಮಾಂಸ ಪಾಠ ಹೇಳಿ ಅವರನ್ನು ತ್ರಿಖಂಡ ಭೂಖಂಡದಲ್ಲಿಯೇ ಅಪ್ರತಿಮ ಪಂಡಿತರೆಂದು ಜಯ ಡಿಂಡಿಮೆ ಹೊಡಿಸಿದವರು ಶ್ರೀ ಶ್ರೀಪಾದರಾಜರೇ!
ವ್ಯಾಸತ್ರಯ ಪ್ರಾಣೇತರಾದ ಶ್ರೀ ಚಂದ್ರಿಕಾಚಾರ್ಯರು ಇವರ ವಿದ್ಯಾ ಶಿಷ್ಯರೆಂದ ಬಳಿಕ ಶ್ರೀ ಶ್ರೀಪಾದರಾಜರ ಪಾಂಡಿತ್ಯವು ಎಷ್ಟು ಪ್ರಚಂಡವಿದ್ದಿತೆಂಬುದನ್ನು ಎಲ್ಲರೂ ಊಹಿಸಬಹುದು. ಶ್ರೀ ವ್ಯಾಸರಾಜರು ಉತ್ತರ ದೇಶಕ್ಕೆ ಸಂಚಾರ ಮಾಡಿ ಅಲ್ಲಿಯ ಕಾಶಿ, ಮಿಥಿಲಾ, ನವದ್ವೀಪ ಮುಂತಾದ ಕಡೆಯ ಮಹಾ ಮಹಾ ಜಗಜ್ಜಟ್ಟಿಗಳನ್ನೆಲ್ಲಾ ನ್ಯಾಯ ಶಾಸ್ತ್ರದಲ್ಲಿಯೂ, ವೇದಾಂತ ಶಾಸ್ತ್ರದಲ್ಲಿಯೂ ಪರಾಭವ ಮಾಡಿ ಜಯಪತ್ರಗಳನ್ನು ಸಂಪಾದಿಸಿ ಉತ್ತರಾಖಂಡದಲ್ಲೆಲ್ಲ ಮಧ್ವ ಮತದ ಜಯಭೇರಿ ಹೊಡೆಸಿದರು ಮತ್ತು ಗಂಗೋಪಾಧ್ಯಾಯರಿಂದ ಹೊಸದಾಗಿ ಪ್ರವರ್ತಿತವಾದ ನವ ನ್ಯಾಯದ ಭವ್ಯ ಪರಿಷ್ಕಾರ ಪ್ರಣಾಲಿಕೆಯನ್ನು ಚನ್ನಾಗಿ ತಿಳಿದುಕೊಂಡು ಅದನ್ನು ಅಕ್ಷರಶಃ ಖಂಡಿಸಿ ” ತರ್ಕತಾಂಡವ ” ಎಂಬ ಉದ್ಗ್ರಂಥವನ್ನು ರಚಿಸಿದರು.