ಶ್ರೀಸುಪ್ರಜ್ಞೇಂದ್ರಾಚಾರ್ಯರು ಜನಿಸಿದ್ದು ಅಕ್ಷಯನಾಮ ಸಂವತ್ಸರದ ಅಧಿಕ ಚೈತ್ರ ಬಹುಳ ಪಂಚಮಿ, ಶನಿವಾರ, ನಂಜನಗೂಡಿನ ‘ದೊಡ್ಡಮನೆ’ಯಲ್ಲಿ. ಆಂಗ್ಲಕಾಲಮಾನದಲ್ಲಿ ದಿನಾಂಕ 03/04/1926ರಂದು. ಗೌತಮ ಗೋತ್ರದ, ಬೀಗಮುದ್ರೆ ಮನೆತನದಲ್ಲಿ, ರಾಯರ ಪೂರ್ವಾಶ್ರಮ ವಂಶದಲ್ಲಿ, ರಾಯರ ಅಂತರಂಗ ಭಕ್ತರ ಜನನ. ಈ ಘಳಿಗೆ ಜ್ಯೋತಿಷ್ಯಾಸ್ತ್ರದ ಲೆಕ್ಕಾಚಾರದಲ್ಲಿ ‘ಗಜಕೇಸರೀ’ ಯೋಗದಿಂದ ಕೂಡಿತ್ತು.
ರಕ್ತಾಕ್ಷಿ ನಾಮ ಸಂವತ್ಸರದ ಫಾಲ್ಗುಣ ಕೃಷ್ಣ ಪಕ್ಷದ ದ್ವಾದಶಿಯ ದಿನ. ರಾಯರ ಸಂಕಲ್ಪಕ್ಕೆ ಅನುಗುಣವಾಗಿ ಶ್ರೀಸುಜಯೀಂದ್ರತೀರ್ಥರು ಯೋಜಿಸಿದ್ದ ಮಹತ್ಕಾರ್ಯದ ಬೀಜ ಮೊಳಕೆಯೊಡೆಯಿತು. ರಾಯಚೂರಿನಲ್ಲಿ ಶ್ರೀಸುಪ್ರಜ್ಞೇಂದ್ರಾಚಾರ್ಯರಿಗೆ ಸನ್ಯಾಸಾಶ್ರಮ ಸ್ವೀಕಾರಕ್ಕಾಗಿ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿಯೇ ಬಿಟ್ಟರು ಶ್ರೀಸುಜಯೀಂದ್ರತೀರ್ಥರು.
ಗುರುರಾಜರ ಅಂತರಂಗ ಭಕ್ತರಾದ ಶ್ರೀಅಪ್ಪಣ್ಣಾಚಾರ್ಯರ ದಿವ್ಯ ಬಿಚ್ಛಾಲಿ ಕ್ಷೇತ್ರದಲ್ಲಿ, 1985ನೇ ಇಸವಿ ಮಾರ್ಚ್ 19ನೇ ತಾರೀಖು, ಫಾಲ್ಗುಣ ಕೃಷ್ಣ ಪಕ್ಷದ ತ್ರಯೋದಶಿ ಶುಭದಿನದಂದು ವೈದಿಕವಿಧಿಪೂರ್ವಕವಾಗಿ, ಶ್ರೀಮಠದ ಅನೂಚಾನ ಸಂಪ್ರದಾಯದಂತೆ ಎಲ್ಲಾ ಪ್ರಕ್ರಿಯೆಗಳು ನಡೆದು ಶ್ರೀಸುಪ್ರಜ್ಞೇಂದ್ರಾಚಾರ್ಯರು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಗುರುಗಳಾದ ಶ್ರೀಸುಜಯೀಂದ್ರತೀರ್ಥರು ಇವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, “ಶ್ರೀಸುಶಮೀಂದ್ರತೀರ್ಥ” ರೆಂದು ನಾಮಕರಣಮಾಡಿ ಮಂತ್ರೋಪದೇಶವನ್ನು ನೀಡಿ ಹರಸಿದರು.