ಶ್ರೀಪುರಂದರದಾಸರ ಪುಣ್ಯದಿನ ಸ್ಮರಣೆ ನಿಮಿತ್ತ…

 

ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್ |
ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್ ||

ಶ್ರೀಪುರಂದರದಾಸರು ಕನ್ನಡನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷಗೆ ವಿಶಿಷ್ಟವಾದ ಗೀತೆಯನ್ನು ತಂದು ಕೊಟ್ಟ ಮಹಾ ಮಹಿಮರು.

ಶ್ರೀಪುರಂದರದಾಸರ ಮೂಲಸ್ಥಾನ ಪಂಢರಪುರದ ಬಳಿಯ ಪುರಂದರಗಢ. ಪೂರ್ವಜೀವನದಲ್ಲಿ ಚಿನಿವಾರರಾಗಿದ್ದ ಇವರು ಅಪಾರ ಐಶ್ವರ್ಯವನ್ನು ಗಳಿಸಿದ್ದರು. ನವಕೋಟಿನಾರಾಯಣ ಎಂಬ ಪ್ರಶಸ್ತಿಯಲ್ಲಿ ಅವರ ಅಗಾಧಸಂಪತ್ತಿನ ಹಿರಿಮೆಯನ್ನು ಕಾಣಬಹುದು

ಪೂರ್ವಜೀವನದಲ್ಲಿ ಜಿಪುಣಾಗ್ರೇಸರರೆಂದು ಸುಪ್ರಸಿದ್ದರಾಗಿದ್ದ ಇವರು ಅನಂತರ ಸರ್ವಸ್ವದಾನ ಮಾಡಿದ ದಾನಶೂರರೆನ್ನಿಸಿದ್ದು ವಿಶಿಷ್ಟ ದೈವಸಂಕಲ್ಪ.‌ ನವಕೋಟಿ ಎನ್ನಿಸಿದ ಮಹಾಲಕ್ಷ್ಮೀಯನ್ನು ತೊರೆದು ಅವಳ ಪತಿಯಾದ ನಾರಾಯಣನನ್ನು ಆರಾಧಿಸಿದ್ಹು ಇವರ ಅಮೋಘ ಸಾಧನೆ. ಕೇವಲ ಮಹಾಲಕ್ಷ್ಮೀಯ ಉಪಾಸನೆ ಅನರ್ಥಕರ. ನಾರಾಯಣ ಉಪಾಸನಯೇ ತಾರಕ ಎಂಬ ಭಗವದ್ಗೀತೆಯ ಹನ್ನೆರಡನೇಯ ಅಧ್ಯಾಯದ ನಿರೂಪಣೆಗೆ ಇವರ ಜೀವನ ನಿದರ್ಶನ.

ಪೂರ್ವಜೀವನದಲ್ಲಿ ಚಿನಿವಾರ ಸುರ್ವಣವ್ಯಾಪಾರಿಗಳಾಗಿದ್ದರೆ‌ ಅನಂತರದಲ್ಲಿ ಮಧ್ವಮತಪ್ರಸಾರಕರಲ್ಲಿ ಶಾಸ್ತ್ರಸುವರ್ಣದ ದಾನಶೂರರೆನ್ನಿಸಿದ್ದು ವಿಶೇಷ. ಅವರ ಇಂತಹ ಪರಿವರ್ತನೆಗೆ ಒಂದು ರೀತಿಯಲ್ಲಿ ಅವರ ಧರ್ಮಪತ್ನಿ ಸರಸ್ವತೀಬಾಯಿಯ ಧರ್ಮಶ್ರದ್ದೆ ಕಾರಣವಾಯಿತು. ಇದರ ಸ್ಮರಣೆಗೆಂಬಂತೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ಎಂದು  ಅವರು ಅನಂತರ ಹಾಡಿದರು. ಪತಿಯು ಸನ್ಮಾರ್ಗ ಹಿಡಿಯಲು ಪತ್ನಿ ವಹಿಸಬೇಕಾದ ಎಚ್ಚರಿಕೆಯನ್ನು ಸರಸ್ವತೀಬಾಯಿಯ ಪ್ರಸಂಗ ಸ್ತ್ರೀ ಕುಲಕ್ಕೆ ನೀಡಿದೆ. ಶ್ರೀವ್ಯಾಸರಾಜರಂತಹ ವಿದ್ವನ್ನಣಿಗಳ ಸಂಪರ್ಕ ಇವರನ್ನು ಮಧ್ವಸಿದ್ದಾಂತದ ವಿಶ್ವರೂಪದರ್ಶನಕ್ಕೆ ಅಣಿಯಾಗಿಸಿತು. ಮಧ್ವಮತದ ಸಿದ್ದಾಂತ ಪದ್ದತಿ ಬಿಡಬೇಡಿ ಬಿಟ್ಟು ಕೇಡಬೇಡಿ ಎಂಬ ಇವರ ಸಂದೇಶ ಜಿಜ್ಞಾಸುಗಳ ಪಾಲಿಗೆ ಅಮೃತಧಾರೆ. ವಿಜಯನಗರವೆನ್ನಿಸಿದ ಹಂಪೆ ಇವರ ಹರಿದಾಸ ಜೀವನ ಮುಖ್ಯ ಕಾರ್ಯಕ್ಷೇತ್ರ ದಶಕಗಳ ಕಾಲದ ಸಂಪರ್ಕ ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ.

ಪುರಂದರದಾಸರ ದೇಶಸಂಚಾರದ ವೈಖರಿಯೂ ಆಗಾಧವಾದುದು ಸಮಗ್ರ ಭರತಖಂಡವನ್ನೇ ಅವರು ಸಂಚರಿಸಿದ್ದುದಕ್ಕೆ ಅವರ ಕೃತಿಗಳಲ್ಲಿ ಸಾಕ್ಷ್ಯ ದೊರೆಯುತ್ತದೆ ಅವರ ಸಂಚಾರ ಕೇವಲ ತೀರ್ಥದರ್ಶನ ವಾಗದೇ ತೀರ್ಥಮಹಿಮೆಯ ಪ್ರಸಾರ ಕಾರ್ಯವೂ ಅಗಿ ಜ್ಞಾನಕಾರ್ಯವೆನ್ನಿಸಿತು. ಅಪಾರ ಸಂಖ್ಯೆಯಲ್ಲಿ ತೀರ್ಥಕ್ಷೇತ್ರಗಳ ಮಹಿಮೆಯನ್ನು ಕುರಿತು ಅವರ ರಚಿಸಿರುವ ಕೃತಿಗಳು ಒಂದರ್ಥದಲ್ಲಿ ಕನ್ನಡತೀರ್ಥಪ್ರಬಂಧದಂತೆ ಮಾನ್ಯವಾಗಿದೆ.

ಆದದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತೂ

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ |

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಳಬುಟ್ಟೀ ಹಿಡಿಸಿದಳಯ್ಯಾ |

ತುಳಸೀಮಾಲೆಯ ಹಾಕುವುದಕ್ಕೆ
ಅರಸನಂತೆ ನಾಚುತಲಿದ್ದೆ
ಸರಸಿಜಾಕ್ಷ ಶ್ರೀಪುರಂದರ ವಿಠಲನು
ತುಳಸೀಮಾಲೆ ಹಾಕಿದನಯ್ಯಾ |

|| ಶ್ರೀಮದ್ವೇಶಾರ್ಪಣಮಸ್ತು ||

ಹುಟ್ಟಿದ್ದು                  : 1484 , ಕ್ಷೇಮಪುರ, ತೀರ್ಥಹಳ್ಳಿ ಹತ್ತಿರ, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
ಜನ್ಮ ನಾಮ              : ಶ್ರೀನಿವಾಸ ನಾಯಕ
ತಂದೆಯ ಹೆಸರು         : ವರದಪ್ಪ ನಾಯಕ
ತಾಯಿಯ ಹೆಸರು        : ಲಕ್ಷ್ಮೀದೇವಿ
ಹೆಂಡತಿಯ ಹೆಸರು       : ಸರಸ್ವತೀಬಾಯಿ
ನಾಲ್ಕು ಜನ ಮಕ್ಕಳು     :  ಲಕ್ಷ್ಮಣ | ಹೇವಣ (ಹೇಮವರ್ಣದಾಸರು) | ಮಧ್ವಪತಿ | ವರದಪ್ಪ

ದಾಸದೀಕ್ಷೆಯ ನಂತರದ ನಾಮ : ಶ್ರೀಪುರಂದರ ದಾಸರು

ಹರಿಪಾದ ಸೇರಿದ್ದು        : 1564, ಪುಷ್ಯಮಾಸ ಬಹುಳ ಅಮಾವಾಸ್ಯೆ, ಹಂಪಿ, ಕರ್ನಾಟಕ

Leave a Reply

Your email address will not be published. Required fields are marked *