ಭಾನುಕೋಟಿ ತೇಜ ಲಾವಣ್ಯ ಮೂರುತಿ
ಶ್ರೀ ವೇಂಕಟೇಶನೇ ನಮೋನಮೋ ಶ್ರೀನಿವಾಸ ದಯಾನಿಧೆ || 1 ||
ಶೇಷಾಚಲನಿವಾಸ ದೋಷದೂರನೆ ಭಕ್ತಪೋ–
ಷಕ ಶ್ರೀಕಾಂತ, ನಮೋನಮೋ ಶ್ರೀನಿವಾಸ ದಯಾನಿಧೆ || 2||
ನೀಲಮೇಘಶ್ಯಾಮ ಪಾಲಸಾಗರಶಯನ ಶ್ರೀ–
ಲಕುಮೀಶನೆ ನಮೋನಮೋ ಶ್ರೀನಿವಾಸ ದಯಾನಿಧೆ || 3 ||
ಖಗರಾಜವಾಹನ ಜಗದೊಡೆಯನೆ ನಿನ್ನ
ಅಗಣಿತ ಮಹಿಮಗೆ ನಮೋನಮೋ ಶ್ರೀನಿವಾಸ ದಯಾನಿಧೆ || 4 ||
ಶಂಖಚಕ್ರಧರ ವೇಂಕಟರಮಣ ಅಕ–
ಳಂಕ ಮೂರುತಿ ದೇವ ನಮೋನಮೋ ಶ್ರೀನಿವಾಸ ದಯಾನಿಧೆ || 5||
ಪನ್ನಂಗಶಯನನೆ ನಿನ್ನಂತ ದೇವರು
ಇನ್ನುಂಟೆ ಅಜಭವಸುರವಂದ್ಯ ಶ್ರೀನಿವಾಸ ದಯಾನಿಧೆ || 6||
ಸೃಷ್ಟಿ ಇಲ್ಲದಲೆ ಒತ್ತಟ್ಟಿಗಿದ್ದವರನ್ನು
ಸೃಷ್ಟಿಸಿ ಜೀವರಸಲಹುವಿ ಶ್ರೀನಿವಾಸ ದಯಾನಿಧೆ || 7||
ತನಮನಕರಣಗಳನು ಕೊಟ್ಟು ಅನಿಮಿಷರ–
ನು ಅಭಿಮಾನಿಗಳೆನಿಸಿದೀ ಶ್ರೀನಿವಾಸ ದಯಾನಿಧೆ||8||
ದೀನವತ್ಸಲ ನಿನ್ನಾಧೀನದೊಳಗಿಟ್ಟು
ಜ್ಞಾನ ಕರ್ಮಗಳ ಮಾಡಿಸುವಿಯೋ ಶ್ರೀನಿವಾಸ ದಯಾನಿಧೆ ||9||
ಕ್ಷಣ ಬಿಡದೆಲೆ ಭಕ್ತಜನರ ರಕ್ಷಿಸುವಿ ದು–
ರ್ಜನರಿಗೆ ದುರ್ಲಭನೆನಿಸುವೀ ಶ್ರೀನಿವಾಸ ದಯಾನಿಧೆ ||10||
ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲವರು
ಉಪಾಸನದಂತೆ ಫಲಗಳೀವಿ ಶ್ರೀನಿವಾಸ ದಯಾನಿಧೆ ||11||
ಒಂದೇ ರೂಪದಿ ಬಹುಮಂದಿಯೊಳಗಿದ್ದು
ಬಂಧಮೋಕ್ಷಪ್ರಧ ಎನಿಸುವೀ ಶ್ರೀನಿವಾಸ ದಯಾನಿಧೆ ||12||
ಜ್ಞಾನಿಗಳರಸ ಅಜ್ಞಾನಿಗಳೊಳು ನಾ ಅ–
ಜ್ಞಾನಿ ಸುಜ್ಞಾನವ ಪಾಲಿಸೋ ಶ್ರೀನಿವಾಸ ದಯಾನಿಧೆ ||13||
ನಂಬಿದೆ ನಾ ನಿನ್ನ ಬಿಂಬ ಮೂರುತಿ ಎನ್ನ
ಡಿಂಬದೊಳಗೆ ಪೊಳೆ ಅನುದಿನ ಶ್ರೀನಿವಾಸ ದಯಾನಿಧೆ ||14||
ನಿನ್ನ ಹೊರತು ಎನಗೆ ಅನ್ಯರಿಂದೇನಯ್ಯ
ನಿನ್ನ ಸ್ತುತಿಪ ಸುಖಕ್ಕೆ ಎಣೆಗಾಣೇ ಶ್ರೀನಿವಾಸ ದಯಾನಿಧೆ ||15||
ಘನ್ನ ಮಹಿಮ ಎನಗಿನ್ನೊಂದು ಬಯಕಿಲ್ಲ
ನಿನ್ನ ಧ್ಯಾನದೊಳಿದು ಮರಿಯದೇ ಶ್ರೀನಿವಾಸ ದಯಾನಿಧೆ ||16||
ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು
ಸಜ್ಜನರ ಸೇವೆಯೊಳಗಿಡೊ ಶ್ರೀನಿವಾಸ ದಯಾನಿಧೆ ||17||
ಏಸು ಜನ್ಮಗಳೀಯೆ ಲೇಸು ಚಿಂತೆಯು ಇಲ್ಲ
ದಾಸನೆಂದೆನಿಸೋ ದಾಸ್ಯವನಿತ್ತು ಶ್ರೀನಿವಾಸ ದಯಾನಿಧೆ ||18||
ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ
ನಿನ್ನ ವಿಸ್ಮರಣೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||19||
ಮನಸಿನ ಚಂಚಲವನ್ನು ತೊಲಗಿಸಿ ಪಾದ
ವನಜದಲ್ಲಿರಿಸಯ್ಯ ಜಿತವಾಗಿ ಶ್ರೀನಿವಾಸ ದಯಾನಿಧೆ||20||
ಕರಣಗಳಿಂದ ಆಚರಿಸುವ ವಿಷಯ ಶ್ರೀ
ಹರಿ ನಿನ್ನ ಸೇವೆಯಾಗಲಿ ಸ್ವಾಮಿ ಶ್ರೀನಿವಾಸ ದಯಾನಿಧೆ ||21||
ಬುಧ್ಧಿಪೂರ್ವಕ ಗುರು ಮಧ್ವಮತವ ತಿಳಿ
ದಿದ್ದವನೆ ಜ್ಞಾನವೃಧ್ಧನೋ ಶ್ರೀನಿವಾಸ ದಯಾನಿಧೆ ||22||
ಹರಿಯೇ ಸರ್ವೋತ್ತಮ ಸುರರೆಲ್ಲ ದಾಸರು
ತಾರತಮ್ಯ ಭೇಧ ಜ್ಞಾನವನೀಯೋ ಶ್ರೀನಿವಾಸ ದಯಾನಿಧೆ ||23||
ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ
ಹರಿ ನಿನ್ನ ಅನುಗ್ರಹವಾಗುವುದೋ ಶ್ರೀನಿವಾಸ ದಯಾನಿಧೆ ||24||
ನಿನ್ನವರಲ್ಲದೆ ಅನ್ಯರು ಬಲ್ಲರೆ
ಘನ್ನಮತದ ಸುಖ ಸವಿಯನ್ನೂ ಶ್ರೀನಿವಾಸ ದಯಾನಿಧೆ ||25||
ನಿನ್ನ ಚಿತ್ತಕೆ ಬಂದುದೆನ್ನ ಚಿತ್ತಕೆ ಬರಲಿ
ಅನ್ಯಥಾ ಬಯಕೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||26||
ಸ್ಥುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ
ಪ್ರತಿದಿನ ಸುಖ ಅಭಿವೃಧ್ಧಿಯೋ ಶ್ರೀನಿವಾಸ ದಯಾನಿಧೆ ||27||
ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ದೊರೆ
ಗುರು ಶ್ರೀಶವಿಟಲ ನಮೋ ಶ್ರೀನಿವಾಸ ದಯಾನಿಧೆ ||28||