ಶ್ರೀರಮಣ ಸರ್ವೇಶ ಸರ್ವದ |
ಸಾರಭೋಕ್ತ ಸ್ವತಂತ್ರ ಸರ್ವದ |
ಪಾರಮಹಿಮೋಧ್ದಾರ ಸದ್ಗುಣ ಪೂರ್ಣ ಗಂಭೀರ |
ಸಾರಿದವರಘದೂರಗೈಸಿ ಸೂರಿಜನರಿಗೆ ಸೌಖ್ಯ ನೀಡುವ |
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ || 1 ||
ಘನ್ನಮಹಿಮಾಪನ್ನಪಾಲಕ |
ನಿನ್ನಹೊರತಿನ್ನನ್ಯದೇವರ |
ಮನ್ನದಲಿನಾನೆನೆಸೆನೆಂದಿಗು ಬನ್ನಪಡಿಸದಿರು |
ಎನ್ನಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ |
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ || 2 ||
ಯಾಕೆ ಪುಟ್ಟದು ಕರುಣ ಎನ್ನೊಳು |
ಸಾಕಲಾರೆಯ ನಿನ್ನ ಶರಣನ |
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ |
ನೋಕನೀಯಕ ನೀನೆ ಎನ್ನನು |
ಜೋಕೆಯಿಂದಲಿ ಕಾಯೋ ಬಿಡದೆ |
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || 3 ||
ಅಂಬುಜಾಂಬಕ ನಿನ್ನ ಪದಯುಗ |
ನಂಬಿಕೊಂಡ ಈ ಪರಿಯಲಿರುತಿರೆ |
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ |
ಬಿಂಬ ಮೂರುತಿ ನಿನ್ನ ಕರಗತ |
ಕಂಬುವರವೇ ಗತಿಯೋ ವಿಶ್ವಕುಟುಂಬಿ |
ಎನ್ನನು ಸಲಹೋ ಸಂತತ ಶೇಷಗಿರಿವಾಸ || 4 ||
ಹಿಂದೆ ನೀ ಪ್ರಹ್ಲಾದಗೋಸುಗ |
ಎಂದು ನೋಡದ ರೂಪ ಧರಿಸಿ |
ಬಂದು ದೈತ್ಯನ ಒಡಲ ಬಗೆದೆ |
ಬಾಲಕನು ತಂದೆತಾಯ್ಗಳ ಬಿಟ್ಟು ವಿಪಿನದಿ |
ನಿಂದು ತಪಿಸುವ ಪಂಚಮತ್ಸರ |
ಕಂದನಾಧ್ರುವನಿಗೋಲಿದು ಪೊರೆದೆಯೊ ಶೇಷಗಿರಿವಾಸ || 5 ||
ಪಿಂತು ಮಾಡಿದ ಮಹಿಮೆಗಳ ನಾನೆಂತು
ವರ್ಣಿಸಲೇನು ಫಲ ಶ್ರೀಕಾಂತ
ಎನ್ನನು ಪೊರೆಯೆ ಕೀರುತಿ ನಿನಗೆ ಫಲವೇನೊ |
ಕಂತು ಜನಕನೆ ಎನ್ನ ಮನಸಿನ |
ಅಂತರಂಗದಿ ನೀನೆ ಸರ್ವದ |
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || 6 ||
ಶ್ರೀನಿವಾಸನೆ ಭಕ್ತಪೋಷನೆ |
ಜ್ಞಾನಿಕುಲಗಳಿಗಭಯದಾಯಕ |
ಧೀನಬಾಂದವ ನೀನೆ ಎನ್ನ ಮನದರ್ಥ ಪೂರೈಸೋ |
ಅನುಪಮೋಪಮಜ್ಞಾನ ಸಂಪದ |
ವಿನಯಪೂರ್ವಕವಿತ್ತು ಪಾಲಿಸೊ |
ಜನುಮಜನುಮಕೆ ಮರೆಯ ಬೇಡವೋ ಶೇಷಗಿರಿವಾಸ || 7 ||
ಮದವು ಮತ್ಸರ ಲೋಭ ಮೋಹವು |
ಒದಗಬಾರದು ಎನ್ನ ಮನದಲಿ |
ಪದುಮನಾಭನೆ ಜ್ಞಾನ ಭಕ್ತಿವಿರಕ್ತಿ ನೀನಿತ್ತು |
ಹೃದಯಮಧ್ಯದಿ ನಿನ್ನ ರೂಪವು |
ವದನದಲಿ ತವ ನಾಮಮಂತ್ರವು |
ಸದಯ ಪಾಲಿಸು ಬೇಡಿಕೊಂಬೇನು ಶೇಷಗಿರಿವಾಸ || 8 ||
ಅಂದನುಡಿ ಪುಸಿಯಾಗಬಾರದು |
ಬಂದ ಭಾಗ್ಯವು ಪೋಗಬಾರದು |
ಕುಂದುಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು |
ಎಂದಿಗಾದರು ದೊರೆಯಬಾರದು |
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || 9 ||
ಏನು ಬೇಡಲಿ ಎನ್ನ ದೇವನೇ |
ಸಾನುರಾಗದಿ ಎನ್ನ ಪಾಲಿಸೊ |
ನಾನಾ ವಿಧವಿಧ ಸೌಖ್ಯನಿಡುವುದಿಹಪರಂಗಳಲಿ |
ಶ್ರೀನಿವಾಸನೆ ನಿನ್ನ ದಾಸಗೆ |
ಏನು ಕೊರೆತಿಲೆಲ್ಲಿ ನೋಡಲು |
ನೀನೆ ನಿಂತೀವಿದದಿ ಪೇಳಿಸು ಶೇಷಗಿರಿವಾಸ || 10 ||
ಆರು ಮನಿದವರೇನು ಮಾಳ್ಪರೊ |
ಆರುವೊಲಿದವರೇನು ಮಾಳ್ಪರೊ |
ಆರುನೇಹಿಗರಾರು ದ್ವೇಷಿಗಳಾರುದಾಶಿನರು |
ಕ್ರೊರ ಜೀವರಹಣಿದು ಸಾತ್ವಿಕ |
ಧೀರ ಜೀವರ ಪೊರೆದು ನಿನ್ನಲಿ |
ಸಾರ ಭಕುತಿಯನಿತ್ತು ಪಾಲಿಸೋ ಶೇಷಗಿರಿವಾಸ || 11||
ನಿನ್ನ ಸೇವೆಯನಿತ್ತು ಎನಗೆ |
ನಿನ್ನ ಪದಯುಗಭಕ್ತಿ ನೀಡಿ |
ನಿನ್ನ ಗುಣಗಣ ಸ್ತವನ ಮಾಡುವ ಜ್ಞಾನ ನೀನಿತ್ತು |
ಎನ್ನ ಮನದಲಿ ನೀನೆ ನಿಂತು |
ಘನ್ನಕಾರ್ಯವ ಮಾಡಿ ಮಾಡಿಸು |
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || 12||
ಜಯ ಜಯತು ಶಠ ಕೂರ್ಮರೂಪನೆ |
ಜಯ ಜಯತು ಕಿಟ ಸಿಂಹ ವಾಮನ |
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ |
ಜಯ ಜಯತು ಸಿರಿ ಯದುವರೇಣ್ಯನೆ |
ಜಯ ಜಯತು ಜನಮೋಹ ಬುದ್ದನೆ |
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || 13||
ಕರುಣಸಾಗರ ನೀನೆ ನಿಜಪದ |
ಶರಣವತ್ಸಲ ನೀನೆ ಶಾಶ್ವತ |
ಶರಣ ಜನಮಂದಾರ ಕಮಲ ಕಾಂತ ಜಯವಂತ |
ನಿರುತ ನಿನ್ನನು ನುತಿಸಿ ಪಾಡುವೆ |
ವರದ ಗುರು ಜಗನ್ನಾಥವಿಠ್ಠಲ |
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || 14 ||