ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ |
ಅಖಿಲ ಗುಣ ಸದ್ಧಾಮ ಮಧ್ವನಾಮಾ || ಪ ||
ಆವ ಕಚ್ಚಪ ರೂಪದಿಂದಲಂಡೊದಕದಿ |
ಓವಿ ಧರಿಸಿಹ ಶೇಷಮೂರುತಿಯನು ||
ಅವನ ಬಳಿ ಪಿಡಿದು ಹರಿಯ ಸುರರೈದುವರು |
ಆ ವಾಯು ನಮ್ಮ ಕುಲ ಗುರುರಾಯನು || ೧ ||
ಆವವನು ದೇಹದೊಳಗಿರಲು ಹರಿ ನೆ ಲೆಸಿಹನು |
ಆವವನು ತೊಲಗೆ ಹರಿ ತಾ ತೊಲಗುವಾ ||
ಆವವನುದೇಹದ ಒಳ ಹೊರಗೆ ನಿಯಾಮಕನು |
ಆ ವಾಯು ನಮ್ಮ ಕುಲ ಗುರುರಾಯನು || ೨ ||
ಕರಣಾಭಿಮಾನಿ ಸುರರು ದೇಹವ ಬಿಡಲು |
ಕುರುಡ ಕಿವುಡ ಮೂಕನೆಂದೆನಿ ಸುವ ||
ಪರಮ ಮುಖ್ಯಪ್ರಾಣ ತೊಲಗ ಲಾ ದೇಹವನು |
ಅರಿತು ಪೆಣವೆಂದು ಪೇಳ್ವರು ಬುಧ ಜನ || ೩ ||
ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ |
ಪರತರನೆನಿಸಿ ನಿಯಾಮಿಸಿ ನೆ ಲೆಸಿಹ ||
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು |
ಗುರುಕುಲ ತಿಲಕ ಮುಖ್ಯ ಪವಮಾನನು || ೪ ||
ಹನುಮಂತದೇವರ ವರ್ಣನೆ
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು |
ವಾತ ಸುತ ಹನುಮಂತನೆಂದೆನಿಸಿದ ||
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ |
ಈತಗೆಣೆಯಾರು ಮೂ ರ್ಲೋಕದೊಳಗೆ || ೫ ||
ತರಣಿಗಭಿಮುಖವಾಗಿ ಶಬ್ದ ಶಾ ಸ್ತ್ರವ ರಚಿಸಿ |
ಉರವಣಿಸಿ ಹಿಂದು ಮುಂದಾಗಿ ನಡೆದ ||
ಪರಮ ಪವಮಾನ ಸುತ ಉದಯಾ ಸ್ತ ಶೈಲಗಳ ||
ಭರದಿ ಐದಿದ ಈತಗುಪಮೆಯುಂಟೆ || ೬ ||
ಅಖಿಲ ವೇದಗಳ ಸಾರ ಪಠಿಸಿದನು ಮುನ್ನಲ್ಲಿ |
ನಿಖಿಳ ವ್ಯಾಕರಣಗಳ ಇವ ಪಠಿಸಿದ ||
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲವೆಂದು |
ಮುಖ್ಯಪ್ರಾಣನನು ರಾಮನನುಕರಿಸಿದ || ೭ ||
ತರಣಿ ಸುತನನು ಕಾಯ್ದು ಶರಧಿಯನು ನೆರೆ ದಾಟಿ |
ಧರಣಿ ಸುತೆಯಳ ಕಂಡು ದನುಜರೊಡನೆ ||
ಭರದಿ ರಣವನೆ ಮಾಡಿ ವಲಿದು ದಿವ್ಯಾಸ್ತ್ರಗಳ |
ಉರುಹಿ ಲಂಕೆಗೆ ಬಂದ ಹನುಮಂತನು || ೮ ||
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ |
ರಧಿಯನು ಕಟ್ಟಿ ಬಹು ರಕ್ಕ ಸರನು |
ಒರೆಸಿ ರಣದಲ್ಲಿ ದಶಶಿರನ ಹುಡಿಗುಟ್ಟಿದ |
ಮೆರೆದ ಹನುಮಂತ ಬಲವಂತ ಧೀರಾ || ೯ ||
ಉರಗ ಬಂಧಕೆ ಸಿಲುಕಿ ಕಪಿವರರು ಮೈವರೆಯೆ |
ತರಣಿ ಕುಲ ತಿಲಕನಾಜ್ಞೆಯ ತಾಳಿದಾ ||
ಗಿರಿ ಸಹಿತ ಸಂಜೀವ ವನ ಕಿತ್ತು ತಂದಿತ್ತ |
ಹರಿ ನರಗೆ ಸರಿಯುಂಟೆ ಹನುಮಂತಗೆ || ೧೦ ||
ವಿಜಯ ರಘುಪತಿ ಮೆಚ್ಚಿ ಧರಣಿ ಸುತೆಯಳಿಗೀಯೆ |
ಭಜಿಸಿ ಮೌಕ್ತಿಕದ ಹಾರವನು ಪಡೆದ ||
ಅಜ ಪದವಿಯನು ರಾಮ ಕೊಡ ಬರಲು ಹನುಮಂತ |
ನಿಜ ಭಕುತಿಯನೆ ಬೇಡಿ ವರವ ಪಡೆದ || ೧೧ ||
ಶ್ರೀ ಭೀಮ ಸೇನ ದೇವರ ವರ್ಣನೆ
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ |
ಸೋಮಕುಲದಲಿ ಜನಿಸಿ ಪಾರ್ಥರೊಡನೆ ||
ಭೀಮ ವಿಕ್ರಮ ರಕ್ಕ ಸರ ಮುರಿದು ಅಟ್ಟಿದ |
ಆ ಮಹಿಮ ನಮ್ಮ ಕುಲ ಗುರುರಾಯಾನು || ೧೨ ||
ಕರದಿಂದ ಶಿಶು ಭಾವನಾದ ಭೀಮನ ಬಿಡಲು |
ಗಿರಿ ಒಡೆದು ಶತಶೃಂಗವೆಂದೆನಿಸಿತು ||
ಹರಿಗಳಾ ಹರಿಗಳಿಂ ಕರಿಗಳಾ ಕರಿಗಳಿಂ |
ಅರೆವ ವೀರನಿಗೆ ಸುರ ನರರು ಸರಿಯೆ || ೧೩ ||
ಕುರುಪಗರಳವನಿಕ್ಕೆ ನೆರೆ ಉಂಡು ತೇಗಿ |
ಆನೆ ತುರಗಗಳಮ್ಯಾ ಲೊದಗಲದನೊರಸಿದ ||
ಅರಗಿನರಮನೆಯಲ್ಲಿ ಉರಿಯನಿಕ್ಕನು ಧೀರ |
ಧರಿಸಿ ಜಾಹ್ನವಿಗೊಯ್ದ ತನ್ನನುಜರ || ೧೪ ||
ಅಲ್ಲಿರ್ದ್ದ ಬಕ ಹಿಡಿಂಬಕರೆಂಬ ರಕ್ಕ ಸರ |
ನಿಲ್ಲದೊರಸಿದ ಲೋಕ ಕಂಟಕರನು ||
ಬಲ್ಲಿದ ಸುರರ ಗೆಲಿದು ದ್ರೌಪದಿಯ ಕೈಪಿಡಿದು |
ಎಲ್ಲ ಸುಜನರಿಗೆ ಹರುಷವ ತೋರಿದ || ೧೫ ||
ರಾಜಕುಲ ವಜ್ರನೆನಿಸಿದ ಮಾಘದನ ಸೀಳಿ |
ರಾಜ ಸಯಾ ಯಾಗವನು ಮಾಡಿಸಿದನು ||
ಆಜಿಯೊಳು ಕೌರವರ ಬಲವ ಸವರುವೆನೆಂದು |
ಮೂಜಗವರಿಯೆ ಕಂಕಣ ಕಟ್ಟಿದ || ೧೬ ||
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು |
ದಾನವರ ಸವರ ಬೇಕೆಂದು ಬೇಗ ||
ಕಾನನವ ಪೊಕ್ಕು ಕಿರ‍್ಮೀರಾದಿಗಳ ತರಿದು |
ಮಾನಿನಿಗೆ ಸೌಗಂಧಿಕವನೆ ತಂ || ೧೭ ||
ದುರುಳ ಕೀಚಕನು ತಾಂ ದ್ರೌಪದಿಯ ಚೆಲುವಿಕೆಗೆ |
ಮರುಳಾಗಿ ಕರೆ ಕರೆಯ ಮಾಡಲವನ ||
ಗರಡಿ ಮನೆಯೊಳು ಬರಿಸಿ ಒರಿಸಿ ಅವನನುಜರ |
ಕುರುಪನಟ್ಟಿದ ಮಲ್ಲ ಕುಲವ ಸದೆದ || ೧೮ ||
ಕೌರವರ ಬಲ ಸವರಿ ವೈರಿಗಳ ನೆಗ್ಗುತ್ತಿ |
ಓರಂತೆ ಕೌರವನ ಮುರಿದು ಮೆರೆದ ||
ವೈರಿ ದುಶ್ಯಾ ಸನನ ರಣದಲ್ಲಿ ಎಡೆಗೆಡಹಿ |
ವೀರ ನರಹರಿಯ ಲೀ ಲೆಯ ತೋರಿದ || ೧೯ ||
ಗುರು ಸುತನು ಸಂಗರದಿ ನಾರಾಯಣಾಸ್ತ್ರವನು |
ಉರವಣಿಸಿ ಬಿಡಲು ಶ ಸ್ತ್ರವ ಬಿ ಸುಟರು ||
ಹರಿ ಕೃಪೆಯ ಪಡೆದಿರ್ದ್ದ ಭೀಮ ಹೂಂಕಾರದಲಿ |
ಹರಿಗೆ ದಿವ್ಯಾ ಸ್ತ್ರವನು ನೆರೆ ಅಟ್ಟಿದ || ೨೦ ||
ನಾರಿ ರೋಧನ ಕೇಳಿ ಮನ ಮರುಗಿ ಗುರು ಸುತನ |
ಹಾರ‍್ಹಿಡಿದು ಶಿರೋರತ್ನ ಕಿತ್ತಿ ತೆಗೆದ ||
ನೀರೊಳಡಗಿದ್ದ ದುರ್ಯೋಧನನ ಹೊರಗೆಡಹಿ |
ಊರುದ್ವಯ ತನ್ನ ಗದೆಯಿಂದ ಮುರಿದ || ೨೧ ||
ಚಂಡ ವಿಕ್ರಮನು ಗದೆಗೊಂಡು ರಣದಿ |
ಭೂಮಂಡಲದೊಳಗಿದಿರಾಂತ ಖಳರನೆಲ್ಲ ||
ಹಿಂಡಿ ಬಿ ಸುಟಿಹ ವೃಕೋಧರನಾ ಪ್ರತಾಪವನು |
ಕಂಡು ನಿಲ್ಲುವರಾರು ತ್ರಿ ಭುವನದೊಳು || ೨೨ ||
ಶ್ರೀಮಧ್ವಾಚಾರ್ಯರ ವರ್ಣನೆ
ದಾನವರು ಕಲಿಯುಗದೊಳವತರಿಸಿ ವಿಬುಧರೊಳು |
ವೇನನ ಮತವನರುಹಲದನರಿತು ||
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ |
ಮಾನನಿಧಿ ಮಧ್ವಾಕ್ಯನೆಂದೆನಿಸಿದ || ೨೩ ||
ಅಧಕತನದೊಳೈದಿ ಬದರಿಯಲಿ ಮಧ್ವಮುನಿ |
ನಿರ್ಭಯದಿ ಸಕಲಶಾ ಸ್ತ್ರಾರ್ಥವ ಪಠಿಸಿದ ||
ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು |
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ || ೨೪ ||
ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ |
ದುರ್ವಾದಿಗಳ ಮತವ ನೆರೆ ಖಂಡಿಸಿ ||
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದ |
ಶರ್ವಾದಿ ಗೀರ್ವಾಣ ಸಂತತಿಯಲಿ || ೨೫ ||
ಏಕವಿಂಶತಿ ಕು ಭಾಷ್ಯಗಳ ಬೇರನು ತರಿದು |
ಶ್ರೀಕರಾರ್ಚಿತನೊಲುಮೆ ಶಾ ಸ್ತ್ರರಚಿಸಿ ||
ಲೋಕತ್ರಯದೊಳಿದ್ದ ಸುರರು ಆಲಿ ಸುವಂತೆ |
ಆ ಕಮಲನಾ ಭ ಯತಿನಿಕರ ಕೊರೆದ || ೨೬ ||
ಬದರಿಕಾಶ್ರಮಕೆ ಪುನರಪಿ ಐದಿ ವ್ಯಾ ಸಮುನಿ |
ಪದಕೆರಗಿ ಅಖಿಲ ವೇದಾರ್ಥಗಳನು ||
ಪದುಮನಾ ಭನ ಮುಖದಿ ತಿಳಿದು ಬ್ರಹ್ಮತ್ವ |
ಐದಿದ ಮಧ್ವಮುನಿರಾಯಗಭಿವಂದಿಪೆ || ೨೭ ||
ಜಯ ಜಯತು ದುರ್ವಾದಿ ಮತತಿಮಿರ ಮಾರ್ತಾಂಡ |
ಜಯ ಜಯತು ವಾದಿಗಜ ಪಂಚಾನನ ||
ಜಯ ಜಯತು ಚಾರ್ವಾಕ ಗರ್ವ ಪರ್ವತ ಕುಲಿಶ |
ಜಯ ಜಯ ಜಗನ್ನಾಥ ಮಧ್ವನಾಥಾ || ೨೮ ||
ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ |
ಭಂಗವಿಲ್ಲದೆ ಸುಖವ ಸುಜನಕೆಲ್ಲ ||
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ |
ಶ್ರೀರಂಗವಿಠ್ಠಲನೆಂದು ನೆರೆ ಸಾರಿರೈ || ೨೯ ||
ಜಗನ್ನಾಥದಾಸರ ಫಲಸ್ತುತಿ
ಸೋಮ ಸೂರ್ಯೋಪರಾಗದಿ ಗೋ ಸಹ ಸ್ರಗಳು |
ಭೂಮಿದೇವರಿಗೆ ಸುರ ನದಿ ತೀರದಿ ||
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು |
ಈ ಮಧ್ವನಾಮ ಬರೆದೋದಿದವರಿಗೆ || ೩೦ ||
ಪುತ್ರರಿಲ್ಲದವರು ಸತ್ಪುತ್ರರೈದುವರು |
ಸರ್ವತ್ರದಲಿ ದಿಗ್ವಿಜಯವಹುದು ಸಕಲ ||
ಶತ್ರುಗಳು ಕೆಡುವರಪಮೃತ್ಯು ಬರಲಂಜುವದು |
ಸೂತ್ರ ನಾಮಕನ ಸಂ ಸ್ಮೃತಿ ಮಾತ್ರದಿ || ೩೧ ||
ಶ್ರೀಪಾದರಾಯ ಪೇಳಿದ ಮಧ್ವನಾಮ |
ಸಂತಾಪವನು ಕಳೆದು ಸೌಖ್ಯವನೀವುದು ||
ಶ್ರೀಪತಿ ಜಗನ್ನಾಥವಿಠ್ಠಲನ ತೋರಿ |
ಭವಾ ಕೂಪಾರದಿಂದ ಕಡೆಹಾಯಿ ಸುವುದು || ೩೨ ||