Suladhi on Digvijaya moolaraama devaru – Uttaradhi mutt(Prasanna venkata dasaru)

ಧ್ರುವತಾಳ
ರಾಮ ರಘುಕುಲ ಸಾರ್ವಭೌಮ ಪೂರಣಕಾಮ
ಜೀಮೂತಶಾಮ ಶ್ರೀಮೂಲರಾಮ
ಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರ
ಪ್ರೇಮಸಾಗರ ಭಕ್ತಜನ ಮನೋಹರ
ಸಾಮಜಾತಿಹರ ಸಾಮಗಾನಾದರ ನಿ
ಸ್ಸೀಮ ಗುಣಗಂಭೀರ ಏಕವೀರ
ಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸ
ನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ||1||

ಮಠ್ಯತಾಳ
ಪಿಂತೆ ಸಮೀರಜನ ಸೇವೆಗೆ ಮೆಚ್ಚ
ತ್ಯಂತ ಪ್ರಸನ್ನನಾಗ್ಯವನ ಶುಭಕರ
ಸಂತತಿಗಭಯವನಿತ್ತಪೆನೆಂದೀಶ
ನಿಂತಿಹೆ ಪ್ರಸನ್ನವೆಂಕಟಪತಿರಾಮ
ಕಂತುಜನಕ ನಿತ್ಯಾನಂದನೆ ನಿ
ನ್ನಂತವರಿಯೆ ನಿಗಮಾಗಮಕಳವೆ ||2||

ತ್ರಿಪುಟತಾಳ
ನಿರುತ ವೈಕುಂಠ ಮಂದಿರವಿದ್ದು
ಪರಣ ಕುಟೀರವನಾಶ್ರಯಿಸುವ ಘನತೆಯೆತ್ತ
ವರಪೀತಾಂಬರ ದಾಮವನು ಬಿಟ್ಟು ವಲ್ಕಲ
ಧರಿಸಿ ಕಾನನದಿ ಸಂಚರಿಪೋದೆತ್ತ
ನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗ
ದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ ||3||

ಅಟ್ಟತಾಳ
ಹರವರದಲಿ ಬಲು ಮತ್ತಾದ ರಜನೀ
ಚರವರ ಲಂಕೆಯಲಿ ಬಲಿದು ಗರ್ವದಿ
ಸುರವರರನುರೆ ಬಾಧಿಸಲವರನು
ಪೊರೆವರು ದಾರಯ್ಯ ನಿನ್ನಿಂದ
ಸ್ಥಿರವರದಾಯಕ ಪ್ರಸನ್ವೆಂಕಟ
ಗಿರಿವರನಿಲಯ ಕೌಸಲ್ಯೆಯ ಕಂದ ||4||

ಆದಿತಾಳ
ಅಕಳಂಕ ಅಕುತೋತಂಕ ಅಕಳಂಕ
ಮಕುಟ ಕುಂಡಲ ಕೌಸ್ತುಭ ಕೇಯೂರ ವಲ
ಯಾಂಕಿತ ಕೋದಂಡ ಕಾರ್ಮುಕಪಾಣಿ
ಅಕಳಂಕ ಸುಖತೀರ್ಥವಂದಿತ ಪಾ
ದಕಮಲ ವಿಧಿನುತ ಮಖಪಾಲಕ ಪ್ರಸನ್ನ
ವೆಂಕಟಾಧಿಪ ಅಕಳಂಕ ||5||

ಜತೆ
ಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿ
ಬಂದು ನೀನಿಂತೆ ನಿಜರಮಣಿಯೊಡನೆ
ಎಂದೆಂದು ಸತ್ಯಾನಭಿವ ತೀರ್ಥ ಗುರು ಹೃದಯ
ಮಂದಿರನೆ ಪ್ರಸನ್ನವೆಂಕಟವರದ ರಾಮ