Sri Srinivasa Devara Sulaadi

Sri Srinivasa Devara Sulaadi

ಧ್ರುವ ತಾಳ

ಮುಪ್ಪು ಇಲ್ಲದ ಅಪ್ಪ ತಿರುಪತಿ ತಿಮ್ಮಪ್ಪ |
ಮುಪ್ಪು ಇಲ್ಲದ ತಾಯಿ ಅಲುಮೇಲು ಮಂಗಾಯಿ |
ಮುಪ್ಪ್ಪು ಇಲ್ಲದ ಗುರು ಶ್ರೀಮದಾಚಾರ್ಯರು |
ಮುಪ್ಪು ಇಲ್ಲದ ಬಾಂಧವರು ಹರಿಭಕ್ತರು |
ಮುಪ್ಪು ಇಲ್ಲದ ಧನ ಹರಿನಾಮ ಸಾಧನ |
ಮುಪ್ಪು ಇಲ್ಲದ ಸದನ ದಿವ್ಯಾನಂತಾಸನ |
ಮುಪ್ಪೇ ಮುಪ್ಪೇ ಇಲ್ಲ ಎಮ್ಮ ಸೌಭಾಗ್ಯಕ್ಕೆ |
ಮುಪ್ಪೂರದೊಳಗೆ ಹರಿದಾಸರಿಗೆ ಎಣೆಯೆ |
ಮುಪ್ಪುರವಗೆಲಿದ ಅನಘ ವಿಜಯವಿಟ್ಠಲರೇಯ |
ಅಪ್ಪಾ ಭಕ್ತರ ಒಡನಾಡುವದು ತಪ್ಪಾ || ೧ ||

ಮಟ್ಟೆ ತಾಳ
ಉಡಲು ಉಣಲುಂಟು ಕೊಡಲು ಕೊಳಲುಂಟು |
ಅಡಗಾಣಿಪ ಭಾವಕಡಲಾಯಾಸವನು |
ಬಡದೆ ದಾಟಾಲಿಉಂಟು ಸಡಗರದಲಿ ದ – |
ಟ್ಟಡಿ ಹರಿನಾಮವ ಹಡಗವೆಂಬುದು ಕೈ – |
ವಿಡಿದು ಸುಖವನ್ನು ಪಡೆದು ವಿಜಯವಿಟ್ಠ – |
ಲೊಡೆಯನಪಾದವ ಬಿಡದೆ ನೆರೆನಂಬೇ ಕೆಡುವದು ವಿಪತ್ತು || ೨ ||

ತ್ರಿವಿಡ ತಾಳ
ಅಚ್ಚುತನ್ನ ನಾಮಾ ಅಚ್ಚು ಹೋಯಿದಂತೆ |
ಅನಂತನ ನಾಮಾ ಕೊನೆ ನಾಲಿಗೆಯಲ್ಲಿ |
ಪಚ್ಚಿಸಿಕೊಂಡು ಆ ಪರಮಾನಂದದಿಂದ |
ಕೆಚ್ಚೆದೆಯ ಯಮಭಟರ ಠಾವಿಗೆ |
ಕಿಚ್ಚುಬೀರುತಲಿ ವೈಷ್ಣವರ ಸುಮತವೆಂಬೋ |
ರಚ್ಚೆಯ ಬಿಡದೆ ಬಲು ಬಿಂಕಾದಲ್ಲೀ |
ವಾಚಸ್ಪತಿ ವಿಜಯವಿಟ್ಠಲನ ಭಕುತಿಗೆ |
ಚೊಚ್ಚಲಮಗನಾಗಿ ಚರಿಸು ಜಾಣನಾಗಿ || ೩ ||

ಅಟ್ಟೆ ತಾಳ
ಈತನು ಈತನು ಈ ತನು ಪುಟ್ಟಿಸಿದ |
ಈ ತನು ಈತಗೆ ಸಂತರ್ಪಣೆ ಮಾಡಿ |
ಈತನ ಪೂಜಿಪ ದೂತರ ಬೆರೆದಾಡು |
ಈ ತನುವಿನೊಳಗಿದ್ದ ವಿಷಯಾದಿಗಳ ಬಿಟ್ಟು |
ಈ ತನು ನೆಚ್ಚದೆ ಇಷ್ಟಾರ್ಥವೀವ ಪು – |
ರಾತನ ವಿಜಯವಿಟ್ಠಲನ ಪಾದದಲಿ |
ಈ ತನು ವಿಡಿದು ವರಗಳ ಬೇಡೋ || ೪ ||

ಆದಿ ತಾಳ
ಹರಿಸರ್ವೋತ್ತಮನಹುದೆಂದು |
ಅರಮರೆ ಇಲ್ಲದಲೆ ಬಿರುದನು ವಹಿಸಿ |
ಉರಗನ ತುಳುಕಿ ತೊರೆಯದೇ ಬಿಂಕವ |
ಧರೆಯೊಳಗೆ ಡಂಗುರವನು ಸಾರಿ |
ಪರಮೇಶ್ವರ ವಿಜಯವಿಟ್ಠಲನ್ನ |
ಶರಣರಿಗೆ ಭಯಗಳು ಇಲ್ಲೆಂದು || ೫ ||

ಜತೆ
ಮಾತುಮಾತಿಗೆ ತಿರುವೆಂಗಳೇಶ ಎನ್ನು |
ಭೂತಕೃತು ವಿಜಯವಿಟ್ಠಲನ ಪಾದವ ಕಾಣೋ || ೬ ||