Sri Raama suladhi – (Ramayana story)

ಧ್ರುವತಾಳ
ರಾಜ ರಾಜ ರಮಣಿ ರಾಜಶೇಖರ ವಿನುತಾ
ರಾಜ ತೇಜೋನಿಧಿ ರಾಜಾಧೀಶಾ
ರಾಜ ಹಂಸ ನಯನ ರಾಜಶೇಖರ ವಿ
ರಾಜಿತ ಕೀರ್ತಿ ಗಜ ರಾಜವರದಾ
ರಾಜ ವದನಾ ರಿಪು ರಾಜಮಸ್ತಕ ಶೂಲಾ
ರಾಜ ರಾಜೋತ್ತಮ ರಾಜವಿನುತಾ
ರಜೀವದೊಳಗಿದ್ದ ರಾಜೀವನ ಪಾಲಿಸಿದ
ರಾಜ ಮಾರ್ತಾಂಡ ದ್ವಿಜರಾಜ ಗಮನಾ
ರಾಜ ರಾಜರು ನಿನ್ನ ರಾಜಿಸುವ ಚರಣ
ರಾಜೀವದಲ್ಲಿ ವಾಲಗ ಮಾಳ್ಪರೂ
ರಾಜ ರಾಜಾಗ್ರಗಣ್ಯ ರಾಜಾಭಿಷೇಕಕ್ಕೆ
ರಾಜ ನೀನಲ್ಲದೆ ರಾಜರುಂಟೇ
ರಾಜಗಂಭೀರ ಅಪರಾಜಿತನಾಮ ನಮ್ಮ
ವಿಜಯ ವಿಠ್ಠಲ ರಂಗರಾಜ
ರಾಜ ಸಮುದ್ರರಾಜ ಶಯನನೇ ||1||

ಮಟ್ಟತಾಳ
ದಶಶಿರನೆಂಬುವನು ಅಸಮ ವೀರನಾಗಿ
ಬಿಸಿನಿಧಿ ಮಧ್ಯದಲ್ಲಿ ತ್ರಿದಶರ ಶೆರೆ ಇಡಲು
ದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತ
ಪಶುಪನ ವರದಿಂದ ಕುಸಿಯದಲಿರುತಿರೇ
ಅಸುರನ ಉಪಹತಿಗೆ ವಸುಧಿಭಾರವಾಗೆ
ಬಿಸಿಜಭವ ಸುಮನಸರೆಲ್ಲರು ಪೋಗಿ
ಬಿಸಿಜದಳನಯನ ವಸುಧಿ ಸಂರಕ್ಷಕನೇ
ಅಸುರರ ಶಿಕ್ಷಕನೆ ಅಸಮಯ ಬಂದಿದೆ
ದೆಶೆಗೆಟ್ಟವರ ಪಾಲಿಸಬೇಕೆಂದೆನುತ
ಶಿಶುಗಳೊದರಿದಂತೆ ಎಸದು ಮೊರೆಯಿಡಲು
ವೃಷಭನಾಮಕದೇವ ವಿಜಯ ವಿಠ್ಠಲರೇಯನ
ಬಿಸಿಜ ಚರಣದಲ್ಲಿ ಹಸನಾಗಿ ಬಿನ್ನೈಸೇ ||2||

ರೂಪಕ ತಾಳ
ಮೂರು ಗುಣರಹಿತ ಮೂರುತಿ ಈತನು
ಕಾರುಣ್ಯವನ್ನು ಇನ್ನಾರು ಬಲ್ಲವರಿಲ್ಲ
ವಾರಿಜಾದ್ಯರ ಸಾರೆಗರದು ಶ
ರೀರವ ತಡವರಿಸಿ ತಾರತಮ್ಯದಿಂದ
ಭಾರ ಎನ್ನದು ಎಂದು ಭರವಸವ ಇತ್ತು
ಕ್ರೂರನಿಂದಲಿ ಬಂದ ಭಾರ ಇಳಿಸುವೆನೆಂದು
ಧಾರುಣಿಯೊಳಗಿತ್ತ ಈರೈದುರಥದವನು
ನಾರಾಯಣನು ಕುಮಾರನಾಗಲೆಂದೂ
ಆರಾಧನೆಯ ಮಾಡೆ ಶ್ರೀರಾಮನೆಂದೆಂಬವ
ತಾರವನ್ನು ಧರಿಸಿದ ರಮಾರಮಣನು
ಚಾರುಗುಣ ನಿಲಯ ವಿಜಯ ವಿಠ್ಠಲರೇಯಾ
ಸಾರಿದವರ ಮನೋಹಾರವ ತೋರುತ್ತಾ ||3||

ಝಂಪಿತಾಳ
ಮುನಿಪ ಕೌಶಿಕನ ಯಾಗವಕಾಯಿದು ತಾಟಿಕಿ
ದನುಜಿಯ ಮುರಿದು ನಿಜಾನುಜನ ಕೂಡ
ಜನಕನಾ ಪುರಕೆ ಗಮನವಾಗಿ ಪೋಗುತ್ತ
ಮುನಿಯಾಂಗನೆಯ ಶಾಪವನ್ನೆ ತೊಡದು
ಅನಲಾಕ್ಷನ ಧನುಸು ಮುರಿದು ಇಕ್ಕಡಿಮಾಡಿ
ಜನಕರಾಯನ ನಂದಿನಿಯ ನೆರದೂ
ಅನುವರದೊಳಗೆ ಭೃಗುತನುಜನ್ನ ಪೊಕ್ಕಳಲಿ
ದನುಜ ಸೇರಿರಲು ಬಾಣದಲಿ ಸದದೂ
ತನಗೆ ತಾನೇ ಲೀಲಿ ತೋರಿದ ಮಹದೈವವಾ
ತನೆ ಕಾಣೋ ಗೋಹಿತ ವಿಜಯ ವಿಠ್ಠಲರಾಮ ||4||

ತ್ರಿವಿಡಿತಾಳ
ಪಿತನ ಮಾತನು ಮನ್ನಿಸಿ ಸತಿಸಹಿತ ಭಾಗೀ
ರಥಿಯ ದಾಟುತಲಿ ಭಕುತಗೊಲಿದೂ
ಅತಿಶಯವಾದ ಪರ್ವತ ಚಿತ್ರಕೂಟದಲಿ
ಯತಿಗಳಿಂದಲಿ ಪೂಜಿತನಾಗುತ
ಮತಿಹೀನನಾಗಿ ಬಾಳುತಲಿದ್ದ ಕಾಕನ್ನ
ಗತಲೋಚನನ ಮಾಡಿ ಕ್ಷಿತಿಗಟ್ಟಿದೇ
ಹಿತವಾಗಿ ಬಂದ ಭರತಗೆ ಹಾವುಗೆ ಕೊಟ್ಟು
ವ್ರತವಧರಿಸಿದ ಉನ್ನತ ಮಹಿಮಾ
ಪಥಚಾರನಾಗಿ ಶೋಭಿಸುತ ದಂಡಕಾರಣ್ಯ
ಯತಿಪುಂಗವ ಕುಂಬಸುತನ ಕಂಡೂ
ಪ್ರತಿರಥ ನಾಮಾ ವಿಜಯ ವಿಠ್ಠಲ ರಘು
ಪತಿ ನೀನೆ ಉತ್ಪತ್ತಿ ಸ್ಥಿತಿ ಲಯಕರ್ತನೇ||5||

ಅಟ್ಟತಾಳ
ಮೋಸದ ಅಸುರಿಯ ಮೂಗುಕೊಯ್ದು ಖರ
ದೂಷಣಾದ್ಯರನ್ನು ಕೊಂದು ಗೌತುಮೆಯಲ್ಲಿ
ವಾಸವಾಗಿದ್ದ ಮಾರೀಚ ಮಾಯಾ ಮೃಗ
ವೇಷವಾಗಿ ಬರೆ ಕೊಂದು ಮಾರ್ಗದಲ್ಲಿ
ಘಾಸಿಯಾಗಿದ್ದ ವಿಹಂಗನ ಮನ್ನಿಸಿ
ದ್ವೇಷಿ ಕಬಂಧನ ಕಡಿದು ಶಬರಿಯ
ಮೀಸಲ ಭಕುತಿಗೆ ಹಣ್ಣುಸವಿದು ಸಂ
ತೋಷದಿಂದಲಿ ತುಂಗಾ ತೀರದಲ್ಲಿ ಪವ
ನಾ ಸೂನು ಎರೆಗಲು ಎತ್ತಿ ಮಾತಾಡಿ ದಿ
ನೇಶ ತನುಜಗೆ ಅಭಯವನ್ನು ಇತ್ತು
ಬೀಸಿಡಗದೆ ಕಾಲಲಿ ದುಂಧುಮಾರನ್ನ
ನೀ ಸವರಿದೆ ಏಳುತಾಳುವ ಒಮ್ಮೆಲೆ
ಸಾಸಿರನಾಮವೇ ವಿಜಯ ವಿಠ್ಠಲ ನರ
ವೇಷವ ಧರಿಸಿದ ವೈಕುಂಠವಾಸ ||6||

ಆದಿತಾಳ
ಭೀತಿ ಶೂನ್ಯನಾದ ಪುರಹೂತ ಮಗನ ಕೊಂದು ರವಿ
ಜಾತಗೆ ಪಟ್ಟವಗಟ್ಟಿ ಪ್ರೀತಿದೂತ ವಾಯುಜನ್ನ
ಸೀತೆ ಬಳಿಗೆ ಕಳುಹೇ ಪೋಗಿ
ಮಾತು ತಂದು ಪೇಳಿದಾತಗೆ ವರವನಿತ್ತು
ಕೋತಿ ಕರಡಿ ಸಹಿತವಾಗಿ ಸೇತುವೆ ಬಿಗಿಸಿ ಬಂದ
ನೀತ ವಿಭೀಷಣನ ಕೂಡ ಕಾತುರದಿಂದಲಿ ದಾಟಿ
ಧೂತ ರಾವಣಾದಿಗಳ ಯಾತನೆಗೆ ಬೀಳ್ಕೋಡಿಸಿ
ಪ್ರೀತಿಯಾಸ್ಪದನಾದತಿದಾತ ವಿಭೀಷಣಗೆ ಪ್ರ
ದ್ಯೋತ ಶಶಿ ಉಳ್ಳನಕ ಭೂತಳದೊಳಗೆ ಲಂಕೆ
ಯ ತಪ್ಪದಂತೆ ಆಳೆಂದಾತಗೆ ಪಟ್ಟವಗಟ್ಟಿ
ಸೀತೆ ಸಹಿತ ಬಂದು ಸಾಕೇತಪುರದಲ್ಲಿ ನಿಂದು
ಧಾತಾದಿಗಳ ಮನಕೆ ಪ್ರೀತಿ ಬಡಿಸಿ ಸೆರೆಯ ಬಿಡಿಸಿ
ಸೀತೆಯರಸ ವಿಜಯ ವಿಠ್ಠಲಭೂತ
ನಾಥನಿಂದ ಬಂದ ಮಾತು ಮನ್ನಿಸಿದ ಮಹಾತ್ಮಾ ||7||

ಜತೆ
ಸಾರ್ವಭೌಮನೆ ರಾಮ ದುರುಳ ದೈತ್ಯವಿರಾಮಾ
ಸರ್ವಯೋಗಿ ವಿನಿಶ್ರುತಾ ವಿಜಯ ವಿಠ್ಠಲ ||8||