ಶ್ರೀಮುಖ್ಯಪ್ರಾಣದೇವರ ಸ್ತೋತ್ರ ಸುಳಾದಿ – ವಿಜಯದಾಸರ ರಚನೆ
ತಾಳ – ಧ್ರುವ
ಕೋತಿಯಾದರೆ ಬಿಡೆನೊ ಬಲುಪರಿ
ಭೂತಳದೊಳು ಪಾರ‍್ಯಾಡಲು ಬಿಡೆನೊ
ಖ್ಯಾತಿ ತೊರೆದು ಕಚ್ಚುಟ ಹಾಕಲು ಬಿಡೆನೊ
ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ
ಭೀತಿ ಬೀರಲು ಬಿಡೆನೊ ಮಾತು
ಮಾತಿಗೆ ಹಲ್ಲು ತೋರಲು ಬಿಡೆನೊ
ಗಾತುರ ಗಗನಕ್ಕೆ ಬೆಳಿಸಲು ಬಿಡೆನೊ
ಕೋತಿ ಸೇವಿಸಲು ಬಿಡೆನೊ
ಆತುರದಲಿ ವನಧಿ ಲಂಘಿಸಿದರೆ ಬಿಡೆ
ಆ ತರುಗಳ ಕಿತ್ತಲು ಬಿಡೆನೊ
ವೀತಿಹೊತ್ರನ ಬಾಲದಲ್ಲಿ ಇಟ್ಟರೆ ಬಿಡೆ
ಜಾತಿ ಧರ್ಮವ ಬಿಟ್ಟರೆ ಬಿಡೆನೊ
ಈ ತೆರದಲ್ಲಿ ನೀನು ಇದ್ದರೇನಯ್ಯಾ ಬೆ
ನ್ನಾತು ಕೇಳುವದು ನಾ ಬಿಡಬಲ್ಲೆನೇ
ತಾತಾ ಇನ್ನಿದರಿಂದ ಆವದಾದರು ಬರಲಿ
ದಾತಾ ಮತ್ತಿದರಿಂದ ಏನಾದರಾಗಲಿ
ಸೋತು ಹಿಂದೆಗದು ಪೋದರೆ ನಿನ್ನ ಪದದಾಣೆ
ಯಾತಕ್ಕೆ ಸಂಶಯವೊ ಬಿಡೆನೊ ಬಿಡೆನೊ ಖ-
ದ್ಯೋತ ಮಂಡಲ ಪೋಗಲು ಬಿಡೆನೊ
ಮಾತು ಪೊಳ್ಳಾದರೆ ನೂರೊಂದು ಕುಲ ಎನ್ನ
ಗೋತ್ರದವರಿಗೆ ಗತಿ ಎಲ್ಲೆದೋ
ವಾತನ್ನ ಮಗವಾತ ಆತನ್ನ ರೂಪವ
ಗಾತುರದಲ್ಲಿ ನಿನ್ನೊಳಗೆ ತೋರೊ
ಜ್ಯೋತಿರ್ಮಯ ರೂಪ ವಿಜಯವಿಠ್ಠಲರೇಯನ
ದೂತದುರ್ಜನಹಾರಿ ದುಃಖನಿವಾರಿ || ೧ ||
ತಾಳ – ಆಟ
ಭೂತಳದೊಳಗೆ ಇದ್ದ ಭೂಮಿ ಸುತ್ತಲು ಬಿಡೆ
ಭೀತನಾಮವನ್ನು ಇಟ್ಟುಕೊಂಡರೆ ಬಿಡೆ
ನೀ ತಿರಿದುಂಡರೆ ಬಿಡೆನೊ ಬಿಡೆನೊ ಅ
ರಾತಿಗಳಿಗೆ ಸೋತು ಅಡವಿ ಸೇರಲು ಬಿಡೆನೊ
ಸೋತುಮತನ ಬಿಟ್ಟು ಅಡಿಗಿ ಮಾಡಲು ಬಿಡೆ
ಘಾತಕ ನೀನಾಗಿ ಕುಲವ ಕೊಂದರೆ ಬಿಡೆ
ಮಾತುಗಾರಿಕೆಯಿಂದ ಯತಿಯಾದರೆ ಬಿಡೆನೊ
ಪ್ರೀತಿ ಸಲಹೊ ಎನ್ನ ಸಾಕದಿದ್ದರೆ ನಿನ್ನ
ಪೂತರೆ ದ್ವಿತಿಯೇಶನೆಂದು ಪೊಗಳಲ್ಯಾಕೆ
ನಾಥನಲ್ಲ ನಿನ್ನ ಮಂತ್ರಿತನವೇನೋ
ಪೋತಭಾವ ನಮ್ಮ ವಿಜಯ ವಿಠ್ಠಲರೇಯನ
ಆತುಮನದೊಳಗಿಟ್ಟ ಭಾರತೀರಮಣಾ || ೨ ||
ತಾಳ – ತ್ರಿವಿಡಿ
ಭಾರವೆ ನಾನೊಬ್ಬ ಶರಣಾ ನಿನಗಲ್ಲವೆ
ಬಾರಿ ಬಾರಿಗೆ ನಿನ್ನ ಅಹಿಕ ಸೌಖ್ಯ
ಮೀರದೆ ಕೊಡು ಎಂದು ಬೇಡಿ ಬ್ಯಾಸರಿಸು ವಿ
ಸ್ತಾರವಾಗಿ ಗುರುವೆ ಕಾಡಿದೆನೇ
ಧಾರುಣಿಯೊಳು ಪುಟ್ಟಿ ಪಾರುಗಾಣದ ಸಂ
ಸಾರಹೇಯವೆಂದು ಕೇಳಿ ನಿನಗೆ
ದೂರಿದೆನೂ ಇದು ದೈನ್ಯದಿಂದಲಿ ವಿ
ಚಾರಿಸಿದರೊಳಿತೆ ಇಲ್ಲದಿದ್ದರೆ ಲೇಸೆ
ಸಾರಿ ಸಾರಿಗೆ ನಿನ್ನ ಸೌಭಾಗ್ಯ ಚರಣವ
ತೋರಿಸಿ ಧನ್ಯನ್ನ ಮಾಡೆಂದೆನೋ
ಕಾರುಣ್ಯದಲಿ ಕೈಟಭಾರಿಪ್ರಿಯನೆ
ಆರನ್ನ ಕಾಣೆನೊ ನಿನ್ನ ವಿನಾ
ಕೀರುತಿ ಅಪಕೀರ್ತಿ ನಿನ್ನದಯ್ಯಾ
ವಾರಣಾವರವಂದ್ಯ ವಿಜಯ ವಿಠ್ಠಲರೇಯನ
ಸೇರುವ ಪರಿಮಾಡೊ ತಾರತಮ್ಯ ಭಾವದಲ್ಲಿ || ೩ ||
ತಾಳ – ಆಟ
ನೀನು ಒಲಿಯೇ ಹರಿ ತಾನೆ ಒಲಿವನಯ್ಯಾ
ನೀನು ಮುನಿದಡೆ ಹರಿ ತಾನೆ ಮುನಿವನು
ಏನೆಂಬೆ ನಿನ್ನ ಮೇಲಣ ಹರಿಕಾರುಣ್ಯ
ನೀನಲ್ಲದಿಲ್ಲದ ಸ್ಥಾನದಿ ತಾನಿಲ್ಲಾ
ಪ್ರಾಣೇಶ ನಮೋ ನಮೋ ನಿನ್ನ ಪಾದಾಬ್ಜಕ್ಕೆ
ವಾನರೇಶ ಸುಗ್ರೀವ ವಾಲಿಸಾಕ್ಷಿ
ಜ್ಞಾನೇಶ ಭಕ್ತಿ ವಿರಕ್ತೇಶ ಅಮರೇಶ
ಆನಂದ ಆನಂದ ಮೂರುತಿ ಗುರುರಾಯ
ಪಾಣಿಗ್ರಹಣ ಮಾಡು ಪತಿತಪಾವನ ದೇವ
ಪ್ರಾಣೇಂದ್ರಿಯಗಳು ದೇಹ ಚೇತನ ಚಿತ್ತವ
ಧ್ಯಾನ ಮಾಡಲಿ ಸರ್ವ ನಿನ್ನಾಧೀನವೆಂದು
ನೀನಿರೆಲಾವಾಗ ಅನ್ಯ ಜನರಿಗೆ ಮತ್ತಾನು
ಬಿನ್ನೈಪೇನೆ ದೇಹತ್ಯಾಗವಾಗಿ
ಶ್ರೀನಾಥ ವಿಜಯವಿಠ್ಠಲರೇಯನ ಪಾದ
ರೇಣು ಧರಿಸುವ ಸರ್ವರುದ್ಧಾರೀ || ೪ ||
ತಾಳ – ಆದಿ
ಎಲ್ಲ ಕಾಲದಲ್ಲಿ ನಿನ್ನಲ್ಲಿ ಭಕ್ತಿ ಇಪ್ಪ
ಸಲ್ಲಲಿತ ಮನುಜರ ಪದಪಾಂಸಶಿರ
ದಲ್ಲಿ ಧರಿಸುವಂತೆ ಸಂತತ ಮತಿಯಿತ್ತು
ಬಲ್ಲಿದ ಕಾಮ ಬಿಡಿಸು ಬಲವಂತ ಗುಣವಂತ
ಬಲ್ಲವ ಭವದೂರ ನೀನೆ ಗತಿಯೊ ಜಗ
ದೊಲ್ಲಭ ಮುಂದಣ ವಾಣೀಶ ಸುಖಪೂರ್ಣ
ಅಲ್ಲದಿದ್ದರೆ ಎನ್ನ ಕಾವ ಕರುಣಿಯ ಕಾಣೆ
ಮಲ್ಲಮರ್ದನ ನಮ್ಮ ವಿಜಯವಿಠ್ಠಲರೇಯನ
ನಿಲ್ಲಿಸಿ ಮನದಲ್ಲಿ ಪ್ರತಿಕೂಲವಾಗಿದೆ || ೫ ||
ಜತೆ
ಅನಂತ ಜನುಮಕ್ಕೆ ನೀನೆ ಗುರು ಎಂಬ
ಜ್ಞಾನವೇ ಕೊಡು ಜೀಯಾ ವಿಜಯವಿಠ್ಠಲದಾಸಾ || ೬ ||