Sri Madhwacharyaru sulaadhi -by Vijaya Dasaru

ಧ್ರುವತಾಳ
ಶ್ರೀಮಧ್ವಿಠಲ ಪಾದಾಂಬುಜ ಮಧುಪ ರಾಜಾ
ಶ್ರೀಮದಾಚಾರ್ಯ ಧೈರ್ಯ ಯೋಗ ಧುರ್ಯಾ
ಕಾಮವರ್ಜಿತ ಕೃಪಾಸಾಗರ ಯತಿರೂಪಾ
ರೋಮ ರೋಮ ಗುಣಪೂರ್ಣ ಪರಣಾ
ಸಾಮ ವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ
ಸೀಮರಹಿತ ಮಹಿಮ ಭುವನ ಪ್ರೇಮ
ತಾಮಸಜನದೂರ ದಂಡಕಮಂಡಲಧರ
ಶ್ರೀ ಮಧ್ವ ಮುನಿರಾಯ ಶೋಭನ ಕಾಯ
ಆ ಮಹಾ ಜ್ಞಾನದಾತ ಅನುಮಾನ ತೀರಥ
ಕೋಮಲಮತಿಧಾರ್ಯ ವೈಷ್ಣವಾರ್ಯ
ಕಾಮ ಸುತ್ರಾಮ ಶರ್ವ ಸುರನುತ ಗುರುಸಾರ್ವ
ಭೌಮಾತಿ ಭಯನಾಶ ಭಾರತೀಶಾ
ರಾಮಕೃಷ್ಣ ವ್ಯಾಸ ವಿಜಯ ವಿಠ್ಠಲನ ಹೃದಯ
ಧಾಮದೊಳಗಿಟ್ಟ ಸತತ ಧಿಟ್ಟಾ ||1||

ಮಟ್ಟತಾಳ
ಹರಿಯೆ ಗುಣಶೂನ್ಯ ಹರಿಯ ನಿರಾಕಾರ
ಹರಿಯು ದೊರೆಯು ಅಲ್ಲ ಹರಿ ಪರತಂತ್ರ
ಹರಿಯು ದುರ್ಬಲನು ಹರಿಗೆ ಎಂಟುಗುಣ
ಹರಿಯು ತಾನೆಂದು ತಾರತಮ್ಯವೆನದೆ
ಧರೆಗೆಲ್ಲ ಮಿಥ್ಯಾ ಪರಿ ಪರಿ ಕರ್ಮಗಳು
ಹರಿತಾನೇ ಪುಟ್ಟಿ ಚರಿಸುವ ಲೀಲೆಯಲಿ
ನರ ನಾನಾ ಜನ್ಮ ಧರಿಸಿ ತೋರುವನೆಂದು
ದುರುಳ ದುರ್ಮತದವರು ಸರಿ ಸರಿ ಬಂದಂತೆ
ಒರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ
ತಿರುಗುತಿರೆ ಇತ್ತ ಸುರರು ಕಳವಳಿಸಿ
ಪರಮೇಷ್ಠಿಗೆ ಪೇಳೆ ಹರಿಗೆ ಬಿನ್ನೈಸಲು
ಮರುತ ದೇವನೆ ಅವತರಿಸಿದ ಹರುಷದಲ್ಲಿ
ಕರುಣಾಕರ ಮೂರ್ತಿ ವಿಜಯ ವಿಠ್ಠಲರೇಯ
ಪರನೆಂದು ಸಾರಿ ಧರೆಯೊಳಗೆ ಮೆರೆದಾ ||2||

ತ್ರಿವಿಡಿತಾಳ
ಶೂನ್ಯವಾದ ಮಿಕ್ಕ ದುರ್ಮತದವರೆಲ್ಲ
ಸನ್ಯಾಯವಿಲ್ಲದ ವಚನದಿಂದ
ಸನ್ಯಾಸಿಗಳೆಂಬೊ ಗರ್ವವಲ್ಲದೆ ವೇದ
ಸನ್ಮತವಾಗದ ದುರ್ಲಕ್ಷಣ
ವನ್ನು ಕಲ್ಪಿಸಿ ಶುಧ್ಧ ಆಚಾರವನೆ ಕೆಡಿಸಿ
ಭಿನ್ನವಿಲ್ಲವೆಂದು ತಿರುಗುತಿರೆ
ಪುಣ್ಯಶ್ಲೋಕ ನಮ್ಮ ವಿಜಯವಿಠ್ಠಲನ
ಸನ್ನುತಿಸದೆ ದ್ವೇಷವ ತಾಳಿರೆ ||3||

ಅಟ್ಟತಾಳ
ಇಪ್ಪತ್ತು ಒಂದು ಕುಭಾಷ್ಯವ ರಚಿಸಿರೆ
ಒಪ್ಪದಿಂದಲಿ ಗೆದ್ದು ಅವರವರ ಮಹಾ
ದರ್ಪವ ತಗ್ಗಿಸಿ ದಶದಿಕ್ಕು ಪೊಗಿಸಿ ಕಂ
ದರ್ಪ ಜನಕನು ಸ್ವತಂತ್ರ ಗುಣಪೂರ್ಣ
ಅಪ್ಪಾರ ಮಹಿಮನು ಸಾಕಾರ ಸತ್ಪುರುಷ
ತಪ್ಪದೆ ತ್ರಿಲೋಕಕ್ಕೊಡೆಯ ಜಗಜೀವ
ನಪ್ಪನು ಸರ್ವಾಂತರಂಗದೊಳಗೆ ಬಿಡ
ದಿಪ್ಪ ವಿಶ್ವಮೂರುತಿ ವಿಲಕ್ಷಣ ರೂಪ
ಸರ್ಪಶಯನ ನಮ್ಮ ವಿಜಯವಿಠ್ಠಲರೇಯ
ಮುಪ್ಪಿಲ್ಲದ ದೈವ ಅಜಭವ ಸುರವಂದ್ಯಾ ||4||

ಆದಿತಾಳ
ದರುಶನ ಗ್ರಂಥವ ರಚಿಸಿ ಸುಜನರಪಾಲಿಸಿ
ಮರುತಮತದ ಬಿರಿದೆತ್ತಿದೆ ಮಹಾಯತಿ
ಸರಿಗಾಣೆ ನಿಮಗೆಲ್ಲ ಪರ್ಣಿಸಲೆನ್ನಳವೆ
ದುರುಳರ ಗಂಟಲಗಾಣ ವಿದ್ಯಾಪ್ರವೀಣಾ
ನೆರೆನಂಬಿದವರಿಗೆಲ್ಲ ಮನೋವ್ಯಥೆಗಳ ಬಿಡಿಸಿ
ಹರಸು ಜ್ಞಾನ ಭಕುತಿ ವಿರಕ್ತಿ ಮಾರ್ಗವ ತೋರಿಸಿ
ಪೊರೆವ ತತ್ವದ ವನಧಿ ಪೊಡವಿಯೊಳಗೆ
ಸುರನರೋರಗಾದಿಗೆ ಗುರುವೆ ಪರಮಗುರುವೆ
ಸರಸ ಸದ್ಗುಣ ಸಾಂದ್ರ ವಿಜಯ ವಿಠ್ಠಲರೇಯನ
ಚರಣವ ನಂಬಿದ ಪ್ರಧಾನ ವಾಯುದೇವಾ ||5||

ಜತೆ
ಅದ್ವೈತ ಮತಾರಣ್ಯ ದಾವಾ ವ್ಯಾಸಶಿಷ್ಯ
ಮಧ್ವಮುನಿ ವಿಜಯ ವಿಠ್ಠಲನ ನಿಜದಾಸಾ ||6||