ರಾಗ – ಭೈರವಿ ತಾಳ – ಧ್ರುವ
ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು
ಕಾಯಾ ನಿರ್ಮಲಿನಾ ಕಾರಣವಾಹದೊ
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ
ಕಾಯವಾ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕ ಕರ್ತ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪಾ
ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿದ
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ
ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ || ೧ ||
ತಾಳ – ಮಟ್ಟ
ಧನ್ವಂತ್ರಿ ಶ್ರೀಧನ್ವಂತ್ರಿ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆವ
ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ
ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠಲನ್ನ
ಸತ್ಯವೆಂದು ಬಣ್ಣಿಸು ಬಹು ವಿಧದಿ || ೨ ||
ತಾಳ – ತ್ರಿವಿಡಿ
ಶಶಿಕುಲೋದ್ಭವ ದೀರ್ಘತಮ ನಂದನದೇವಾ
ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೂದೆ ತಾಪ ಓ
ಡಿಸುವವೌಷಧಿ ತುಲಸಿ ಜನಕ
ಅಸುರ ನಿರ್ಜರ ತತಿನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ
ಬಿಸಜಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೊ
ದಶದಿಶದೊಳು ಮೆರೆವ ವಿಜಯ ವಿಠ್ಠಲಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ || ೩ ||
ತಾಳ – ಆಟ
ಶರಣು ಶರಣು ಧನ್ವಂತರಿ ತಮೋಗುಣನಾಶಾ
ಶರಣು ಆರ್ತಜನ ಪರಿಪಾಲಕ ದೇವಾ
ತರುವೆ ಭವ ತಾಪಹರಣ ದಿತಿಸುತ
ಹರಣ ಮೋಹಕ ಲೀಲಾ ಪರಮಪೂರ್ಣ ಬ್ರಹ್ಮ
ಬ್ರಹ್ಮ ಉದ್ಧಾರಕ ಉರುಪರಾಕ್ರಮ
ಉರುಪರಾಕ್ರಮ ಉರಗಶಾಯಿ
ವರಕಿರೀಟ ಮಹಾಮಣಿ ಕುಂಡಲಕರ್ಣ
ಮಿರುಗುವ ಹಸ್ತ ಕಂಕಣ ಹಾರಪದಕ ತಾಂ
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಚ್ಛನ ವಿಜಯ ವಿಟ್ಠಲರೇಯಾ
ತರುಣಗಾತರ ಜ್ಞಾನ ಮುದ್ರಾಂಕಿತ ಹಸ್ತಾ || ೪ ||
ತಾಳ – ಆದಿ
ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ
ಬೀಳುವಾಗಲಿ ನಿಂತು ಕುಳಿತಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ
ಮ್ಮೇಳವಾಗಲಿ ಮೇಲು ಪುತ್ರಾದಿ ಒಡೆಯೊಡನೆ
ಖೇಳವಾಗಿ ಮನುಜಮರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವೇಳ್ಯ ವೇಳ್ಯಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ || ೫ ||
ಜತೆ
ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲ ವೊಲಿವಾ || ೬ ||