ಹರಿದಾಸ ಲಕ್ಷಣ ಸುಳಾದಿ
ಧ್ರುವತಾಳ
ಹರಿದಾಸರ ಲಕ್ಷಣ ಇರಬೇಕು ಈ ಪರಿ
ಗರುವ ಕೋಪ ಮದ ಮತ್ಸರಾದಿ ಬಿಡಬೇಕು
ಮರುತ ಮತಕೆ ಎಲ್ಲಿ ಸರಿಗಾಣೆನೆನುತಲಿ
ಧರಿಯೋಳು ಕೂಗಿ ಡಂಗುರವ ಹೊಯಲಿಬೇಕು
ಎರಡಾರು ಪುಂಢ್ರವ ವಿರಚಿಸಿ ಪಂಚಮುದ್ರಾ
ಧರರಾಗಿ ತಪ್ತಾಂಕಿತ ಧರಿಸಬೇಕು ಭುಜದಲ್ಲಿ
ಶಿರಿಬೊಮ್ಮ ಹರಾದ್ಯರಿಗೆ ತಾರತಮ್ಯಭಾವದಿಂದ
ಎರಗಿ ಎನ್ನೊಳಗಿದ್ದು ಪೊರೆಯೆಂದಾಡಲಿಬೇಕು
ಕರಣ ನಯನ ಶ್ರವಣನಾಸಾವದನ
ಪರಿಪರಿ ಅಂಗಗಳು ಹರಿವಿತ್ತವೆನ್ನಬೇಕು
ಗುರುಹಿರಿಯರಿಗೆ ಆದರಪೂರ್ವಕದಿಂದ
ಕರಮುಗಿದು ನಮಸ್ಕರಿಸಿ ನುತಿಸಬೇಕು
ನೆರೆಹೊರೆಯವರಿಗೆ ನಿರುತ ಇದ್ದರು ಬೇ
ಸರಗೊಳಿಸದೆ ಸಂಚರಿಸುತ್ತಲಿರಬೇಕು
ಹಣ ಹರಿಯಾಧೀನ, ನೆರೆದ ಸತಿಸುತರು
ನಿರುತ ಹರಿಗೆ ದಾಸರು ಎಂದು ಗುಣಿಸಬೇಕು
ಪರಮ ಭಕುತಿ ಜ್ಞಾನವಿರಕುತಿ ಮಾರ್ಗವು
ದೊರಕುವುದಕ್ಕೆ ಸಜ್ಜನರ ಸಂಗವಾಗಬೇಕು
ಹರಿದಾಸ್ರ ಹರಿಚರಿತೆ ಹರಿಶ್ರವಣ ಹರಿಪೂಜೆ
ಹರಿಸ್ಮರಣೆ ಅಂತರ ಶುಚಿ ಇರಲಿಬೇಕು
ಹರಿ ಪರದೇವತಿ ವಿಜಯವಿಠಲ ಗತೀ
ಸುರರಾಧ್ಯರಿಗೆಂದು ಉರವಣಿಸಿ ನುಡಿಬೇಕು || ೧ ||
ಮಟ್ಟತಾಳ
ಪರಧನ ಪರಸತಿ ಪರನಿಂದ್ಯದವರ
ಸರಸದಲ್ಲಿರದೆ ಚರಿಸಬೇಕು ದೂರ
ನರರು ಬೈದರೆ ಆದರವೆಂದು ತಿಳಿದು
ಹರುಷ ಬಡಲಿಬೇಕು ಸುರತರು ದೊರೆತಂತೆ
ಕರೆದು ಮನ್ನಿಸಿದರು ಇರಳು ಹಗಲು ಪಾಲುಗರೆವ
ಸುರಧೇನು ಬರಡಾಗಿನಿಂದ ಪರಿಯೆಂದೆನಬೇಕು
ನೆರೆದು ಸಂದಣಿಯೊಳು ಚರಿಸಬಾರದು ಪೋಗಿ
ಬರಿದೆ ಕುಳಿತು ಹಾಳಹರಟೆಯ ಪೇಳದಲೆ
ಮರಿಯದೆ ಸೊಲ್ಲು ಇರಬೇಕು ತನ್ನೊಳಗೆ
ಪರಮ ತತ್ತ್ವವ ತಿಳಿದು ದುರಳರಿ
ಗರುಹದಲೆ ಸುರಿಯಬೇಕು ಸುಖವ
ಮರಳೆ ಮರಳೆ ನೆನೆದು ಪರಮಗುಪ್ತನಾದ ವಿಜಯ ವಿಠ್ಠ
ಲರೇಯನ ನೆರೆ ನಂಬಲಿಬೇಕು ಕುರುಹ ಕಾಣುವಂತೆ || ೨ ||
ತ್ರಿವಿದತಾಳ
ಲೇಸಾದರು ಹರಿಯ ಕಾರುಣ್ಯವೆನಬೇಕು
ಲೇಸಾಗದೆ ಬಲು ಮೋಸವಾದಲ್ಲಿ
ಕ್ಲೇಶ ಬಂದಡರಲು ಏಸು ಜನ್ಮದ ಪಾಪ
ರಾಸಿಯ ಫಲಿಸಿತೋ ಎನ್ನ ಕರ್ಮ
ಈ ಶರೀರಕೆ ಬಂದು ಪ್ರಾಪ್ತವಾದುದು ಅನುಭ
ವಿಸದಲೇ ಬಿಡದು ಸಿದ್ಧವೆಂದು
ಲೇಶವಾದರೂ ದುಃಖ ಹಚ್ಚಿಕೊಳ್ಳದೆ ಮಹಾ
ತೋಷದಲ್ಲಿರಬೇಕು ನೋಯದಲೆ
ಶ್ರೀಶನೆ ಗತಿ ಎಂದು ಬೇಸರದಲೆ ಬಂದ
ಕ್ಲೇಶಗಳುಣಬೇಕು ಬಂದಾಗಲು
ದೇಶ ಕಾಲ ಗುಣ ಪರಿಪೂರ್ಣ ಹರಿ ಇರೆ
ಘಾಸಿ ಎಲ್ಲಿದೊ ಎಂದು ನಲಿಯಬೇಕು
ಶ್ರೀ ಸತಿ ಕಾಲ ವೇದ ಜೀವ ಪ್ರಳಯದಲ್ಲಿ
ನಾಶವಾಗವು ಭೇದ ಅನಲಿಬೇಕು
ವ್ಯಾಸ ವಚನ ಮಧ್ವರಾಯರು ಮಾಡಿದ
ಭಾಷ್ಯ ಸಮ್ಮತದಿಂದ ನೋಡಬೇಕು
ವಾಸುದೇವ ನಮ್ಮ ವಿಜಯವಿಠ್ಠಲನ್ನ
ದಾಸಾನುದಾಸರ ದಾಸನಾಗಲಿಬೇಕು || ೩ ||
ಅಟ್ಟತಾಳ
ಬಡತನ ಬಂದರು ಹಿಗ್ಗುತಲಿರಬೇಕು
ಜಡನಾಗಿ ಬಾಹ್ಯದಲ್ಲಿ ತೋರಲಿಬೇಕು
ಅಡಿಗಡಿಗೆ ಲಜ್ಜೆಗೇಡಬೇಕು ಸರ್ವದ
ಒಡಲಿಗೆ ಚಿಂತೆಮಾಡದೆ ದೃಢ ಇರಬೇಕು
ಒಡವೆ ವಸ್ತ್ರ ತಂದೆ ತಾಯಿ ತ್ರಿಲೋಕದ
ಒಡಿಯ ಶ್ರೀಕೃಷ್ಣನೆಂದು ಬಿಡದೆ ನಂಬಲಿಬೇಕು
ಯಡಿಗೆ ಪರಿಮಿತ ಧಾನ್ಯ ತರಲಿಬೇಕು
ಕೊಡಬೇಕು ಕೊಡಬೇಕು ಒಬ್ಬರಿಗದರೊಳು
ಕಡುಗಲಿ ವಿಜಯವಿಠಲ ರಂಗನಪಾದ
ಪಿಡಿದು ಭಜಿಸಬೇಕು ನಲಿನಲಿದಾಡುತ್ತ || ೪ ||
ಆದಿತಾಳ
ಉಟ್ಟದಕ್ಕಿಂತ ಮೇಲು ತೊಟ್ಟದಕ್ಕಿಂತ ಮೇಲು
ಇಟ್ಟದಕ್ಕಿಂತ ಮೇಲು ವಿಠಲನ್ನ ಸ್ಮರಣೆ ಮನ
ಮುಟ್ಟಿ ನಮಿಸಲಿಬೇಕು ಬಲುಹಿತದಲ್ಲಿ
ಅಟ್ಟಹಾಸದಲ್ಲಿ ಚೀರಿ ಬಿಟ್ಟಿಕ್ಕಿ ಕೂಗಿ ತೂಗುತ
ಇಷ್ಟಸುಖಕ್ಕಿಂತ ಮೇಲು
ದಟ್ಟಡಿಯಿಂದ ತಿಳಿದು ನಿಷ್ಠೆಯಿಂದಲಿ ಇರಲು
ಇಷ್ಟಪ್ರಾಪುತ ಅವರಿಗರಿಷ್ಟವು ಪರಿಹಾರ
ಹುಟ್ಟುಸಾವಿಲ್ಲದ ವಿಜಯವಿಠಲ ತಾನು
ಕೊಟ್ಟು ಸಾಕುವ ದಯವಿಟ್ಟು ದಾಸನ ಮಾಡಿ || ೫ ||
ಜತೆ
ಈ ಪರಿ ಇದ್ದವಂಗೆ ಅನಂತ ಜನುಮಕ್ಕೆ
ತಾಪತ್ರಯಗಳಿಲ್ಲ ವಿಜಯವಿಠಲ ಬಲ್ಲ || ೬ ||