ಧ್ರುವತಾಳ
ಹನುಮಂತನ ಬಲಗೊಂಡರೆ –
ಹರಿಪದಸೇವೆ ದೊರೆಕೊಂಬುದು|
ಹನುಮಂತನ ಬಲಗೊಂಡರೆ ನವವಿಧ
ಭಕುತಿಯು ದೊರಕೊಂಬುದು|
ಹನುಮಂತನ ಬಲಗೊಂಡರೆ ತಾರತಮ್ಯ ಪಂಚಭೇದ ಜ್ಞಾನ
ದೊರೆಕೊಂಬುದು
ಹನುಮಂತನ ಬಲಗೊಂಡರೆ ದಯದಿಂದ
ಪುರಂದರ ವಿಠಲ ತಾ ಕೈ ಪಿಡಿವ ||1||
ಮಟ್ಟತಾಳ
ಹನುಮಂತನ ಕಾಣದೆ ವಾಲಿ ಬಳಲಿದ|
ಹನುಮಂತನ ಕಂಡು ಸುಗ್ರೀವ ಬದುಕಿದ |
ಹನುಮಂತನ ಪ್ರಿಯ ಪುರಂದರ ವಿಠಲ|| 2||
ಝಂಪೆ ತಾಳ
ಎಂದೆಂದೂ ತನ್ನ ಮನವಗಲದೆ ಇರು ಎಂದು |
ಅಂದೇ ಇತ್ತನು ಬೊಮ್ಮ ಪದವಿ ಹನುಮಂತಗೆ |
ತಂದೆ ಶ್ರೀ ರಾಮಚಂದ್ರ ಪುರಂದರ ವಿಠಲ |
ಅಂದೆ ಇತ್ತನು ಬೊಮ್ಮ ಪದವಿ ಹನುಮಂತಗೆ | |3||
ಅಟ್ಟ ತಾಳ
ಹಬ್ಬಿದರ್ಜುನನ ಧ್ವಜಾಗ್ರಕ್ಕೆ |
ಬೊಬ್ಬಿಟ್ಟು ಬಾಹ ಪರಬಲ ಬರಿದು ಮಾಡಿದ |
ಸಬ್ಬಲ ಸೂರೆಗೊಂಡನು ಹನುಮಂತ |
ಪುರಂದರ ವಿಠಲನ ಬಂಟ ಹನುಮಂತ | |4||
ಆದಿತಾಳ
ರೋಮಕೋಟಿಲಿಂಗ ಹೇಮಕುಂಡಲಧರ |
ಭೀಮ ಬೆಳೆದನು ಬ್ರಹ್ಮಾಂಡಕ್ಕೆ |
ಸ್ವಾಮಿ ಪುರಂದರ ವಿಠಲರೇಯನ ಬಲುಬಂಟ ಹನುಮಂತ|| 5||
ಜತೆ
ವಿಜಯೀಭವ ಹನುಮಂತ ವಿಜಯೀಭವ ಗುಣವಂತ |
ವಿಜಯೀಭವ ಪುರಂದರ ವಿಠಲನ ಬಲುಬಂಟ ಹನುಮಂತ ||